ADVERTISEMENT

ಹುನಗುಂದ: ₹55 ಲಕ್ಷ ಮೌಲ್ಯದ 84 ಬೈಕ್ ವಶ

ಬಾಗಲಕೋಟೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವೆಡೆ ಬೈಕ್‌ ಕಳ್ಳತನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 4:15 IST
Last Updated 11 ಫೆಬ್ರುವರಿ 2022, 4:15 IST
ಹುನಗುಂದ ಪಟ್ಟಣದ ಪೋಲಿಸರು ವಶಪಡಿಸಿಕೊಂಡ ಬೈಕ್‌ಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್‌ ಹಾಗೂ ಪೊಲೀಸರು ಇದ್ದಾರೆ
ಹುನಗುಂದ ಪಟ್ಟಣದ ಪೋಲಿಸರು ವಶಪಡಿಸಿಕೊಂಡ ಬೈಕ್‌ಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್‌ ಹಾಗೂ ಪೊಲೀಸರು ಇದ್ದಾರೆ   

ಹುನಗುಂದ: ಕಳೆದ ಎರಡು ವರ್ಷಗಳಿಂದ ಬೈಕ್ ಕಳ್ಳತನ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಪತ್ತೆ ಹಚ್ಚಿ ಬಂಧಿಸಿರುವ ಪಟ್ಟಣದ ಪೊಲೀಸರು ಅವರಿಂದ 84 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ್‌ ₹25 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಗುರುವಾರ ಹುನಗುಂದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಲೋಕೇಶ ಜಗಲಾಸರ್‌, ‘ಬಂಧಿತ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು ಸೇರಿ ಇತರ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕದ್ದು, ಅವುಗಳನ್ನು ಕಡಿಮೆ ದರಕ್ಕೆ ಬೇರೆಯವರಿಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದರು. ಪೊಲೀಸರು ಗಸ್ತು ಸಂದರ್ಭದಲ್ಲಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸಾಯಿಸಾಗರ ಹೋಟೆಲ್ ಹತ್ತಿರ ಸಂಶಯಾಸ್ಪದವಾಗಿ ನಿಂತ ಈ ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಹುನಗುಂದ ಸಿಪಿಐ ಹೊಸಕೇರಪ್ಪ ಕೆ, ಪಿಎಸ್ಐಗಳಾದ ಸೋಮನಗೌಡ ಗೌಡರ, ಎಸ್.ಆರ್.ನಾಯ್ಕ ತಮ್ಮ ತಂಡದೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿ ಮಾರಾಟ ಮಾಡಿದ ಬೈಕ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳ ಅಂದಾಜು ಮೊತ್ತ ₹55 ಲಕ್ಷಕ್ಕೂ ಹೆಚ್ಚಾಗಲಿದೆ ಎಂದರು.

ADVERTISEMENT

ಮೂಲಗಳ ಪ್ರಕಾರ ಈ ನಾಲ್ವರು ಆರೋಪಿಗಳು ಮುದ್ದೇಬಿಹಾಳ ಹಾಗೂ ಹುನಗುಂದ ತಾಲ್ಲೂಕಿನ ಕಮತಗಿ, ಹಿರೇಮಾಗಿ, ರಕ್ಕಸಗಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ಭೇದಿಸಲು ಶ್ರಮಿಸಿದ ಸಿಪಿಐ, ಪಿಎಸ್ಐ ಸೇರಿದಂತೆ ಠಾಣಾ ಸಿಬ್ಬಂದಿ ಎನ್.ಎಲ್.ವಾಲಿಕಾರ, ಐ.ಎಂ. ಹಿರೇಗೌಡರ, ಎಸ್.ಬಿ. ಹೊಸಮನಿ, ಆನಂದ ಗೋಲಪ್ಪನವರ, ಜಿ.ಎ. ಪವಾರ, ಸಿ.ಟಿ. ಲಮಾಣಿ, ವಿ.ಡಿ. ಗೌಡರ, ಎ.ಎಲ್. ನಧಾಪ, ರಜಾಕ ಗುಡದಾರ, ಬಿ.ಎಸ್. ಬಾವಿಕಟ್ಟಿ, ರಾಣಪ್ಪ ಹಂಚನಾಳ, ಬಸವರಾಜ ಆಮದಿಹಾಳ, ಸುರೇಶ ಆಲೂರ, ರಮೇಶ ಸಮಗಾರ, ಯಮನೂರ ವಡ್ಡರ, ರಮೇಶ ಹೊಸಮನಿ, ಮಹಾಂತೇಶ ದೊಡಮನಿ, ನಾಗೇಶ ಜೆ, ಮಹಾಂತಗೌಡ ಗೌಡರ, ಜಿ.ಎಂ. ಪರಡಿಮಠ, ಸಂಗಪ್ಪ ತುಪ್ಪದ, ಸಿ.ಸಿ. ಪಾಟೀಲ, ರಮೇಶ ನಾವಿ, ವಿಜಯ ರಾಠೋಡ ಅವರನ್ನು ಜಗಲಾಸರ್‌ ಅಭಿನಂದಿಸಿದರು.

ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ, ಸಿಪಿಐ ಹೊಸಕೇರಪ್ಪ ಕೊಳೂರ, ಪಿಎಸ್ಐಗಳಾದ ಸೋಮನಗೌಡ ಗೌಡರ, ಎಸ್.ಆರ್.ನಾಯ್ಕ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.