ADVERTISEMENT

ಮಹಾಲಿಂಗಪುರ: ಕರಡಿ ಮಜಲಿನ ಅಭಿನವಗೆ ಬಾಲಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:23 IST
Last Updated 13 ಡಿಸೆಂಬರ್ 2025, 4:23 IST
ಅಭಿನವ ಕರಡಿ
ಅಭಿನವ ಕರಡಿ   

ಮಹಾಲಿಂಗಪುರ: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2022-23ನೇ ಸಾಲಿನ ಬಹುಮುಖ ಪ್ರತಿಭೆ ಕ್ಷೇತ್ರದ ಬಾಲಗೌರವ ಪ್ರಶಸ್ತಿ ಪಟ್ಟಣದ ಅಭಿನವ ಕರಡಿಗೆ ಲಭಿಸಿದೆ.

ಶುಭ ಸಮಾರಂಭ, ಜಾತ್ರೆ-ಉತ್ಸವಗಳಲ್ಲಿ ಬಾರಿಸುವ ಚರ್ಮ ವಾದ್ಯಗಳಲ್ಲಿಯೇ ಶ್ರೇಷ್ಠ ವಾದ್ಯವಾಗಿರುವ ಕರಡಿ ವಾದನ ಕಲೆಯಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತ ಸಾಧನೆಯ ಹಾದಿಯಲ್ಲಿರುವ ಕಲಾವಿದ ಅಭಿನವ, ಹೊಸೂರಿನ ಪದ್ಮಾವತಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಕೇವಲ ಮೂರು ವರ್ಷದ ಮಗುವಿದ್ದಾಗಲೇ ವಂಶಪಾರಂಪರಿಕ ಕರಡಿ ಮಜಲು ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ.

ಅಜ್ಜ ಗಂಗಪ್ಪ, ತಂದೆ ಚಂದ್ರಶೇಖರ ಅವರ ಕರಡಿ ಕಲೆಯನ್ನು ನೋಡಿ ಕಲಿತ ಈತ ಕರಡಿ ಮಜಲಿನ ಹಲವು ಗತ್ತುಗಳನ್ನು ಸರಾಗವಗಿ ನುಡಿಸುತ್ತ ತನ್ನದೇ ವಯಸ್ಸಿನ ಹುಡುಗರನ್ನು ಜತೆ ಮಾಡಿಕೊಂಡು ಕಲಾತಂಡವನ್ನೇ ಕಟ್ಟಿಕೊಂಡಿದ್ದಾನೆ. ಜಮಖಂಡಿಯ ಬಸವ ಜ್ಞಾನ ಗುರುಕುಲದ ದಶಮಾನೋತ್ಸವ ಆಚರಣೆಯಲ್ಲಿ ಹಂಸಲೇಖ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡಿದ್ದಾನೆ.

ADVERTISEMENT

ಕರ್ನಾಟಕ ಜಾನಪದ ಕಲೆಯ ವಾದ್ಯ ಸಂಗೀತವನ್ನು ಕಲಿಯುತ್ತಲೇ ತನ್ನ ಜ್ಞಾನವನ್ನು ವಿಸ್ತರಿಸಿಕೊಂಡು ಓದಿನಲ್ಲೂ ಅಗ್ರಸ್ಥಾನದಲ್ಲೇ ಇರುವಂತೆ ನೋಡಿಕೊಂಡಿರುವುದು ನಿಜಕ್ಕೂ ಅಭಿನವನ ಹೆಗ್ಗಳಿಕೆ. ರಾಜ್ಯ ಹಾಗೂ ಹೊರರಾಜ್ಯದ ಹಲವಾರು ಪ್ರಮುಖ ವೇದಿಕೆಗಳಲ್ಲಿ ತನ್ನ ಕರಡಿಮಜಲು ಕಲೆ ಪ್ರಸ್ತುತ ಪಡಿಸಿ ದಿಗ್ಗಜರಿಂದ ಭೇಷ್ ಎನಿಸಿಕೊಂಡಿದ್ದಾನೆ.

ಕರಡಿ ಮಜಲು ಕಲೆಯ ಪ್ರದರ್ಶನ ನೀಡುತ್ತಿರುವ ಅಭಿನವ ಕರಡಿ

ರಾಜ್ಯ ಹಾಗೂ ಹೊರರಾಜ್ಯದಲ್ಲಿ 640ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟಿದ್ದಾನೆ. ಮಹಾರಾಷ್ಟ್ರದ ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಈತನ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿ ವರ್ಷ ಶಿವರಾತ್ರಿ ದಿನ ಮಠದಲ್ಲಿ ಕಾರ್ಯಕ್ರಮ ಆಯೋಜಿಸುತ್ತಾರೆ ಎಂಬುದು ವಿಶೇಷ. ಅಭಿನವನ ಕಲೆಗೆ ಅನೇಕ ಸಂಘ-ಸಂಸ್ಥೆಗಳಿಂದ ವಿವಿಧ ಪ್ರಶಸ್ತಿ, ಸನ್ಮಾನಗಳು ದೊರಕಿವೆ.

‘ಅಭಿನವನಿಗೆ ಬಾಲಗೌರವ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. 11ನೇ ತಿಂಗಳಲ್ಲೆ ಆತನಿಗೆ ಕರಡಿವಾದ್ಯದ ಕಲಿಕೆಯ ಒಲವು ಮೂಡಿಸಲಾಗಿದೆ. ಮಗನ ಸಾಧನೆ ಹೆಮ್ಮೆ ತರಿಸಿದೆ’ ಎಂದು ಅಭಿನವನ ತಂದೆ ಚಂದ್ರಶೇಖರ ಕರಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.