ADVERTISEMENT

ಮುಧೋಳ| ಬಿಸಿಯೂಟ ಸೇವಿಸಿ 66 ಬಾಲಕಿಯರು ಅಸ್ವಸ್ಥ

ಮುಧೋಳ ಆಸ್ಪತ್ರೆಯಲ್ಲಿ ಚಿಕಿತ್ಸೆ: ಎಲ್ಲರೂ ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 12:35 IST
Last Updated 21 ಡಿಸೆಂಬರ್ 2019, 12:35 IST
ಮುಧೋಳದ ಸರ್ಕಾರಿ ಆಸ್ಪತ್ರೆಯ ಎದುರು ಶನಿವಾರ ನೆರೆದಿದ್ದ ಮಕ್ಕಳು ಪೋಷಕರು ಹಾಗೂ ಬೆಳಗಲಿ ಗ್ರಾಮಸ್ಥರು
ಮುಧೋಳದ ಸರ್ಕಾರಿ ಆಸ್ಪತ್ರೆಯ ಎದುರು ಶನಿವಾರ ನೆರೆದಿದ್ದ ಮಕ್ಕಳು ಪೋಷಕರು ಹಾಗೂ ಬೆಳಗಲಿ ಗ್ರಾಮಸ್ಥರು   

ಮುಧೋಳ: ತಾಲ್ಲೂಕಿನ ಬೆಳಗಲಿ ಪಟ್ಟಣದ ಕನ್ನಡ ಹೆಣ್ಣುಮಕ್ಕಳ ಮಾದರಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ 66 ಬಾಲಕಿಯರು ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಮೂರು ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಆ್ಯಂಬುಲೆನ್ಸ್ ಮೂಲಕ ಎಲ್ಲರನ್ನು ಮುಧೋಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ. ಸಂಜೆ ವೇಳೆಗೆ ಎಲ್ಲ ಮಕ್ಕಳನ್ನೂ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಶಾಲೆಯಲ್ಲಿಒಂದರಿಂದ ಏಳನೇ ತರಗತಿವರೆಗೆ ಒಟ್ಟು 299 ವಿದ್ಯಾರ್ಥಿಗಳಿದ್ದಾರೆ. ಮೊದಲು 5ನೇ ತರಗತಿವರೆಗಿನ ಮಕ್ಕಳಿಗೆ ಊಟ ನೀಡಲಾಗಿದೆ ಇವರು ಊಟ ಮಾಡಿದ ತಕ್ಷಣ ಅಸ್ವಸ್ಥರಾದ ಕಾರಣ ಉಳಿದ ಮಕ್ಕಳಿಗೆ ಊಟ ನೀಡಲಾಗಿಲ್ಲ. ಇದರಿಂದ ಹೆಚ್ಚಿನ ಮಕ್ಕಳಿಗೆ ತೊಂದರೆಯಾಗಿಲ್ಲ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಹಾಂತೇಶ ನರಸನಗೌಡ್ರ ಹೇಳಿದರು.

ADVERTISEMENT

ಅಸ್ವಸ್ಥ ಮಕ್ಕಳನ್ನು ಮುಧೋಳ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಸುದ್ದಿ ತಿಳಿದ ಪಾಲಕರು ಹಾಗೂ ಸಂಬಂಧಿಗಳು ಆಸ್ಪತ್ರೆಗೆ ಧಾವಿಸಿದರು. ಅವರನ್ನು ನಿಯಂತ್ರಿಸುವುದರಲ್ಲಿ ಪೊಲೀಸರು ಹೈರಾಣಾದರು.

ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಶಿಫಾರಸು: ಶಾಲೆಯ ಮುಖ್ಯ ಶಿಕ್ಷಕಿ ಎಸ್. ಎಲ್. ಕಠಾರೆ ಅವರನ್ನು ಅಮಾನತು ಮಾಡಲು ಡಿಡಿಪಿಐ ಅವರಿಗೆ ವರದಿ ಸಲ್ಲಿಸಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ ದೇವಲಗಾಂವಿ ತಿಳಿಸಿದ್ದಾರೆ.

ಬಿಸಿ ಊಟದ ಸಿಬ್ಬಂದಿಯನ್ನು ಕೆಲಸದಿಂದ ತಗೆದುಹಾಕಲಾಗಿದೆ. ಹೊಸ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ದಾಸರ ತಿಳಿಸಿದ್ದಾರೆ.

’ಮಕ್ಕಳಿಗೆ ನೀಡಿದ ಊಟವನ್ನು ಪರೀಕ್ಷೆ ಮಾಡಲು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಯ ನಂತರವಷ್ಟೇರ ಕಾರಣ ಗೊತ್ತಾಗಲಿದೆ‘ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.