ಬೀಳಗಿ: ‘ಮಣ್ಣು ನಂಬಿದರೆ ಹೊನ್ನು’ ಎನ್ನುವಂತೆ ಮಣ್ಣನ್ನೇ ನಂಬಿ ಬದುಕು ಕಟ್ಟಿಕೋ ಎನ್ನುವ ಸ್ನೇಹಿತ ಯಮನಪ್ಪ ಬನೆಪ್ಪನವರ ಅವರ ಸಲಹೆಯಂತೆ ತಾಲ್ಲೂಕಿನ ಸುನಗ ಗ್ರಾಮದ ಪಧವೀಧರ ರೈತ ಮಲ್ಲಿಕಾರ್ಜುನ ಸಗರಪ್ಪ ಕೋಟಿ ತಮ್ಮ 13 ಎಕರೆ ಜಮೀನಿನಲ್ಲಿ ಕಬ್ಬು , ಉಳ್ಳಾಗಡ್ಡಿ, ಕುಂಬಳ, ಹತ್ತಿ ಮಿಶ್ರ ಕೃಷಿ ಮಾಡಿ ನಿರಂತರ ಆದಾಯ ಕಂಡುಕೊಂಡಿದ್ದಾರೆ.
ಈಚೆಗೆ ಕಲ್ಲಂಗಡಿ ಬೆಳೆ ಹುಲುಸಾಗಿ ಬೆಳೆದು 55 ದಿನಗಳಲ್ಲಿ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ಸದ್ಯ ₹ 22ರಂತೆ ಮಾರಾಟವಾಗುತ್ತಿದೆ. ಹೀಗಾಗಿ ಇದರಿಂದ ಉತ್ತಮ ಆದಾಯ ಬಂದಿದೆ.
ಮಲ್ಲಿಕಾರ್ಜುನ ಮೊದಲ ಬಾರಿಗೆ ಕಲ್ಲಂಗಡಿ ಬೆಳೆದಿದ್ದಾರೆ. ಸದ್ಯ ಮೆಲೊಡಿ ಕೆಎಸ್‌ಪಿ 1697 ತಳಿಯ ತಲಾ ಅಗಿಯನ್ನು (ಸಸಿ) ₹ 2.80ರಂತೆ 12,000 ಅಗಿಗಳನ್ನು ಖರೀದಿಸಿ ನಾಟಿ ಮಾಡಿದ್ದರು. ಕಲ್ಲಂಗಡಿ ನಾಟಿ ಮಾಡಿದ್ದ ಎರಡು ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಹೊಲಕ್ಕೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ.
ಸಸಿಯಿಂದ ಸಸಿಗೆ ನಿಯಮಿತವಾಗಿ 1.5 ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ಗೊಬ್ಬರವನ್ನು ಆ ರಂಧ್ರಗಳ ಮೂಲಕವೇ ನೀಡಲಾಗಿದೆ . ಅಲಿಮ್ ಮುಜಾವರ ಅವರ ನಿರ್ದೇಶನದ ಮೇರೆಗೆ ಎರೀಸ್ ಅಗ್ರೊ ಲಿಮಿಟೆಡ್ ಗೊಬ್ಬರ ಬಳಸಿದ್ದಾರೆ.
‘ಕಲ್ಲಂಗಡಿ ಬೀಜ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇಲ್ಲಿಯವರಗೆ ₹ 2.20 ಲಕ್ಷದಷ್ಟು ಖರ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಬೆಳೆ ಚೆನ್ನಾಗಿ ಬಂದಿದೆ. ಇದರಿಂದ ಖರ್ಚು, ವೆಚ್ಚ ಹೋಗಿ ₹ 7 ಲಕ್ಷ ಲಾಭ ಬಂದಿದೆ’ ಎಂದು ರೈತ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು. ಕಲ್ಲಂಗಡಿಗೆ ಉಡುಪಿ, ಮಂಗಳೂರು, ಗೋವಾ, ಬೆಂಗಳೂರುಗಳಲ್ಲಿ ಉತ್ತಮ ಬೆಲೆ ಸಿಗುವುದರಿಂದ ಅಲ್ಲಿಗೆ ಕಳುಹಿಸಿ ಮಾರುತ್ತಿದ್ದೇನೆ ಎಂದು ಅವರು ತಿಳಿಸಿದರು.
‘ನನಗೆ ಹಿರಿಯರಿಂದ 13 ಎಕರೆ ಭೂಮಿ ಬಳುವಳಿಯಾಗಿ ಬಂದಿದೆ. ಎರಡು ಎಕರೆ ಕುಂಬಳ, ಎರಡು ಎಕರೆ ಹತ್ತಿ, ಇನ್ನುಳಿದ ಭೂಮಿಯಲ್ಲಿ ಕಬ್ಬು ಬೆಳೆದಿದ್ದೇನೆ. ಕೃಷಿಯಲ್ಲಿ ಹೊಸ ಬಗೆಯ ಪದ್ಧತಿಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ’ ಎನ್ನುತ್ತಾರೆ ಮಲ್ಲಿಕಾರ್ಜುನ.
ಯುವಕರು ಖಾಸಗಿ ಉದ್ಯೋಗ ಹುಡುಕಿ ಪಟ್ಟಣಕ್ಕೆ ಹೋಗುವುದಕ್ಕಿಂತ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು. ಕೃಷಿ ಕ್ಷೇತ್ರ ಲಾಭದಾಯಕ ಮತ್ತು ನೆಮ್ಮದಿ ತರುತ್ತದೆ.–ಮಲ್ಲಿಕಾರ್ಜುನ ಸಗರಪ್ಪ, ಕೋಟಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.