
ಶಿರೂರ(ರಾಂಪುರ): ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳಿಗೆ ಪ್ರತ್ಯುತ್ತರ ಕೊಡಲು ಜ21 ರಂದು ಹುಬ್ಬಳ್ಳಿಯಲ್ಲಿ ಅಹಿಂದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿಣಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಶಾಲಾ ಮೈದಾನದಲ್ಲಿ ಶನಿವಾರ ಜರುಗಿದ ಅಹಿಂದ ಬಾಗಲಕೋಟೆ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿಶತ 84 ರಷ್ಟು ಅಹಿಂದ ವರ್ಗದ ಜನ ಇದ್ದಾರೆ. ಸಿದ್ಧರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಆಗಿರಲೆಂದು ಜನ ಮತ ಹಾಕಿದ್ದಾರೆ. ಹೀಗಾಗಿ ಮಧ್ಯದಲ್ಲಿ ಇಳಿಸುವ ಪ್ರಯತ್ನ ಸರಿಯಲ್ಲ. ಇದನ್ನು ಅಹಿಂದ ವರ್ಗ ಪ್ರಬಲವಾಗಿ ವಿರೋಧಿಸುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ವರ್ಗದ ಜನರಿಗೆ ಅನುಕೂಲತೆ ಕಲ್ಪಿಸಿ ಬಡವರ ಬಾಳಿಗೆ ಬೆಳಕಾಗಿರುವ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದ ಪ್ರಭುಲಿಂಗ, ಅಹಿಂದ ಜನ ಒಗ್ಗಟ್ಟಾಗಿ ನಮ್ಮ ಪಾಲಿನ ಹಕ್ಕು ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಅಹಿಂದ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಹಾಗೂ ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವ ಸಿದ್ಧಾಂತದ ತಳಹದಿಯ ಮೇಲೆ ಅಹಿಂದ ಸಂಘಟನೆ ರೂಪುಗೊಂಡು ಕೆಲಸ ಮಾಡುತ್ತಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದರು.
ಸಮಾವೇಶ ಉದ್ಘಾಟಿಸಿದ ಮಲ್ಲಿಕಾರ್ಜುನ ಮೇಟಿ, ಅಹಿಂದ ವರ್ಗದ ಪ್ರತಿ ವ್ಯಕ್ತಿ ಶಿಕ್ಷಣವಂತರಾಗಬೇಕು. ಪಾಲಕರು ಈ ದಿಸೆಯಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಸಂಘಟನೆ ಇಡೀ ರಾಜ್ಯದಲ್ಲಿ ಬಲಿಷ್ಠವಾಗಿದ್ದು ಶೋಷಿತ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಅಹಿಂದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಿದ್ದಮ್ಮ ಪಾಟೀಲ ಮಾತನಾಡಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.
ಅಹಿಂದ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಮೇಳಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶೇಖರ ಕಾಖಂಡಕಿ, ಜಿಲ್ಲಾ ಉಪಾಧ್ಯಕ್ಷ ವಿರುಪಾಕ್ಷಪ್ಪ ಹಡಗಲಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಂಜುಳಾ ಭೂಸಾರೆ, ಮಹಿಳಾ ತಾಲ್ಲೂಕು ಅಧ್ಯಕ್ಷೆ ಪವಿತ್ರಾ ಜಕ್ಕಪ್ಪನವರ, ಶ್ರೀಶೈಲ ತೇಜಿ, ನಿಂಗಪ್ಪ ಜೋಗಿ, ಪಟ್ಟಣ ಪಂಚಾಯತಿ ನಾಮನಿರ್ದೇಶನ ಸದಸ್ಯರಾದ ಸಿದ್ದಪ್ಪ ಗಾಳಿ, ಜಗದೀಶ ದೇಸಾನಿ, ಹನಮಂತ ಆಡಿನ, ರಂಗಪ್ಪ ಮಳ್ಳಿ, ಸಿದ್ದಪ್ಪ ಹಂಡರಗಲ್, ಚಂದ್ರಶೇಖರ ಬಸರಿಗಿಡದ, ರಾಮನಗೌಡ ಮಾಚಾ, ಸಂಜಯ ನಡುವಿನಮನಿ ಮತ್ತಿತರರು ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.