ADVERTISEMENT

ಐಹೊಳೆ | ಐತಿಹಾಸಿಕ ಸ್ಮಾರಕಗಳು ಸಂಸ್ಕೃತಿ ಪ್ರತೀಕ: ನಾರಾಯಣ ಭಾಂಡಗೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 4:00 IST
Last Updated 28 ಸೆಪ್ಟೆಂಬರ್ 2025, 4:00 IST
<div class="paragraphs"><p>ಅಮಿನಗಡ ಸಮೀಪದ ಐಹೊಳೆಯಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿದರು</p></div>

ಅಮಿನಗಡ ಸಮೀಪದ ಐಹೊಳೆಯಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿದರು

   

ಅಮೀನಗಡ: ಭಾರತದ ಇತಿಹಾಸ ಪರಂಪರೆಯಲ್ಲಿ ಬಾದಾಮಿ ಚಾಲುಕ್ಯರ ಸ್ಮಾರಕಗಳು ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಮೂಲಕ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿವೆ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಅಭಿಪ್ರಾಯಪಟ್ಟರು.

ಶನಿವಾರ ಸಮೀಪದ ಐಹೊಳೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪ್ರವಾಸಿ ತಾಣಗಳು ತಿಳಿಸುತ್ತಿವೆ ಎಂದರು.

ADVERTISEMENT

ಐಹೊಳೆಯ ದುರ್ಗಾ ದೇವಾಲಯ ಮಾದರಿಯಲ್ಲಿ ದೇಶದ ಸಂಸತ್ ಭವನ ನಿರ್ಮಾಣವಾಗಿದ್ದು, ಅಭಿಮಾನದ ಸಂಗತಿ. ಜಿಲ್ಲೆಯ ಐಹೊಳೆ, ಪಟ್ಟದಕಲ್ಲು, ಬಾದಾಮಿ ಐತಿಹಾಸಿಕ ತಾಣಗಳಿಗೆ ವರ್ಷದುದ್ದಕ್ಕೂ ದೇಶ-ವಿದೇಶದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಶಿಲ್ಪಕಲೆ ವೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಇಂದಿನ ಯುವ ಸಮೂಹ ಐತಿಹಾಸಿಕ ತಾಣಗಳು, ನಾಡಿನ ಶಿಲ್ಪಕಲೆ, ಸಂಸ್ಕೃತಿಯನ್ನು ಅರಿತು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಕಮತಗಿಯ ವೈ.ಆರ್ ಪಾಟೀಲ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಿ.ಐ.ಮೋಮಿನ್ ಉಪನ್ಯಾಸ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಗೋಪಾಲ ಹಿತ್ತಲಮನಿ ಮಾತನಾಡಿ, ವಿಶ್ವ ಪರಂಪರೆಯ ತಾಣ ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸಿ ಸರ್ಕೀಟ್‌ ನಿರ್ಮಾಣಕ್ಕಾಗಿ ₹100 ಕೋಟಿ ಅನುದಾನ ಬಿಡುಗಡೆಯಾಗಿದೆ. ಐಹೊಳೆ ಹಾಗೂ ಪಟ್ಟದಕಲ್‌ನಲ್ಲಿ ತ್ರಿ ಸ್ಟಾರ್ ಹೋಟೆಲ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ವರ್ಷದೊಳಗೆ ಪೂರ್ಣಗೊಳ್ಳಲಿವೆ. ಪ್ರವಾಸೋದ್ಯಮ ಬೆಳವಣಿಗೆಯಿಂದ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲದೆ ಸಂಸ್ಕೃತಿ, ಪರಂಪರೆ ಕಾಪಾಡಿಕೊಂಡು ಹೋಗಬಹುದು ಎಂದರು.

ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಪುರಾತತ್ವ ಇಲಾಖೆಯ ರಮೇಶ ಮೂಲಿಮನಿ, ಪ್ರಶಾಂತ ಕುಲಕರ್ಣಿ, ಕೆಎಂಎಫ್ ನಿರ್ದೇಶಕ ಸಂಗಣ್ಣ ಹಂಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಬಿ.ಸಿ ಅಂಟರತಾನಿ, ಯುವರಾಜ ದೇಸಾಯಿ, ಪ್ರವಾಸಿ ಮಾರ್ಗದರ್ಶಿ ಕೊಟ್ರೇಶ ಸಾರಂಗಮಠ, ಪಿ.ಎಫ್ ಗೋಡಿ, ಜಗದೀಶ ಹೊಸಮನಿ ಇದ್ದರು.

ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ ಎಂದು ಎಸ್.ಬಿ ಮಾಯಾಚಾರಿ, ಅತ್ಯುತ್ತಮ ಪ್ರವಾಸಿ ಮಿತ್ರ ಎಂದು ಯಮುನಪ್ಪ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.

ವಿಜೇತರಿಗೆ ಬಹುಮಾನ

ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸೌಮ್ಯ ಚೊಳಚಗುಡ್ಡ (ಪ್ರಥಮ) ಪೂರ್ಣಿಮಾ ಹೊಸಮನಿ (ದ್ವಿತೀಯ) ಸುಜಾತಾ ತೋಳಮಟ್ಟಿ ರೋಹಿಣಿ ಬೆಣ್ಣೂರ (ತೃತೀಯ) ಭಾಷಣ ಸ್ಪರ್ಧೆಯಲ್ಲಿ ಜಯಶ್ರೀ ತಿಗಳನ್ನವರ (ಪ್ರಥಮ) ಸವಿತಾ ಪತ್ತಾರ (ದ್ವಿತೀಯ) ಸಬಿಯಾಕೌಸರ್ ಲಾಠಿ (ತೃತೀಯ) ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಕುಂಬಾರ (ಪ್ರಥಮ) ರಾಜೇಶ್ವರಿ ಹಿರೇಮಠ (ದ್ವಿತೀಯ) ಸಾವಿತ್ರಿ ಹೂಲಗೇರಿ (ತೃತೀಯ) ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.