ADVERTISEMENT

ಐಹೊಳೆ: ಜನವಸತಿ ಸ್ಥಳಾಂತರಕ್ಕೆ ರಂಗ ಸಜ್ಜು

12 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮತ್ತೆ ಚಾಲನೆ

ವೆಂಕಟೇಶ್ ಜಿ.ಎಚ್
Published 9 ಅಕ್ಟೋಬರ್ 2018, 20:15 IST
Last Updated 9 ಅಕ್ಟೋಬರ್ 2018, 20:15 IST
ಜನವಸತಿ ನಡುವೆ ಐಹೊಳೆಯ ಸ್ಮಾರಕಗಳ ನೋಟ
ಜನವಸತಿ ನಡುವೆ ಐಹೊಳೆಯ ಸ್ಮಾರಕಗಳ ನೋಟ   

ಬಾಗಲಕೋಟೆ: ಇಲ್ಲಿನ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಐಹೊಳೆಯಲ್ಲಿನ ಜನವಸತಿಯನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯಕ್ಕೆ ಸರ್ಕಾರ ಮತ್ತೆ ಚಾಲನೆ ನೀಡಿದೆ. 12 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಈಗ ಜೀವ ಬಂದಿದೆ. ಅಕ್ಟೋಬರ್ 1ರಂದು ಐಹೊಳೆಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಸ್ಥಳೀಯರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ.

‘ಚಾಲುಕ್ಯರ ಕಾಲದ ವಾಸ್ತುಶಿಲ್ಪದ ತೊಟ್ಟಿಲು’ ಎಂದೇ ಕರೆಯಲಾಗುವ ಐಹೊಳೆ, ವಿಶ್ವಮಟ್ಟದಲ್ಲಿ ಮನ್ನಣೆ ಪಡೆದಿದೆ. ಗ್ರಾಮದಲ್ಲಿ ಜನವಸತಿಯ ನಡುವೆಯೇ 90ಕ್ಕೂ ಹೆಚ್ಚು ಸ್ಮಾರಕಗಳು ಇವೆ. ಕೆಲವು ಕಡೆ ಸ್ಮಾರಕಗಳಲ್ಲಿಯೇ ಜನರು ವಾಸವಿದ್ದಾರೆ. ಆದರೆ ಸ್ಮಾರಕಗಳ ನೆಲೆಯನ್ನು ಸಂರಕ್ಷಿತ ಪ್ರದೇಶ ಎಂದು ಭಾರತೀಯ ಪುರಾತತ್ಚ ಇಲಾಖೆ (ಎಎಸ್‌ಐ) ಗುರುತಿಸಿದೆ.

ಆರಂಭದಲ್ಲಿ ಒಂಬತ್ತು ದೇವಾಲಯ ಸಂಕೀರ್ಣಗಳ ಸುತ್ತಲಿನ 144 ಮನೆಗಳ ಸ್ಥಳಾಂತರಕ್ಕೆ ಎಎಸ್‌ಐ ಮುಂದಾಗಿತ್ತು. ಅದಕ್ಕಾಗಿ 2006ರಲ್ಲಿ ₹30 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಅಂದಿನ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವೇ ಅನುಮೋದನೆ ನೀಡಿತ್ತು.ಆದರೆ, ಆಗ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಂಪೂರ್ಣ ಜನವಸತಿಯನ್ನೇ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.

ADVERTISEMENT

ಹಾಗಾಗಿ ಮರು ಸಮೀಕ್ಷೆ ನಡೆಸಿ 942 ಮನೆಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು. ವರ್ಷಗಳು ಉರುಳಿದಂತೆ ಯೋಜನಾ ವೆಚ್ಚವೂ ಹೆಚ್ಚಳಗೊಂಡು 2015ರ ಜೂನ್ 10ರಂದು ₹362 ಕೋಟಿ ವೆಚ್ಚದ ಮತ್ತೊಂದು ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಯಿತು. ಸ್ಥಳಾಂತರಿಸಬೇಕಾದ ಮನೆಗಳ ಸಂಖ್ಯೆ 1,052 ಕ್ಕೆ ಏರಿಕೆಯಾಯಿತು.

‘ಈಗ ಹೊಸ ಭೂಸ್ವಾಧೀನ ಕಾಯ್ದೆಯಡಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಬೇಕಿರುವುದರಿಂದ ವೆಚ್ಚ ಇನ್ನೂ ಹೆಚ್ಚಾಗಲಿದೆ’ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಂ.ಎನ್. ಮೇಲಿನಮನಿ ಹೇಳುತ್ತಾರೆ.

‘ಸ್ಥಳಾಂತರಕ್ಕೆ ಈಗಾಗಲೇ 51 ಎಕರೆ ಭೂಮಿ ಗುರುತಿಸಲಾಗಿದೆ. ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿ, ವಿಶ್ವಮಟ್ಟದಲ್ಲಿ ಐಹೊಳೆ ದೇವಾಲಯಗಳ ಪ್ರಾಮುಖ್ಯತೆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ತಿಳಿಸಿದರು.

ರೋಸಿ ಹೋಗಿದ್ದೆವು: ರಾಮಣ್ಣ ಕುರಿ

‘ಐಹೊಳೆ ಸಂರಕ್ಷಿತ ಪ್ರದೇಶವಾದ್ದರಿಂದ ನಮ್ಮ ಮನೆಗೆ ಸುಣ್ಣ– ಬಣ್ಣ ಬಳಿಯಲು, ಶೌಚಾಲಯ ಕಟ್ಟಿಕೊಳ್ಳಲು, ಶಿಥಿಲಗೊಂಡ ದನದ ಕೊಟ್ಟಿಗೆ ಕಟ್ಟಿಕೊಳ್ಳಲು ಕಾಯ್ದೆ– ಕಾನೂನಿನ ನಿರ್ಬಂಧವಿದೆ. ಸಣ್ಣಪುಟ್ಟ ದುರಸ್ತಿ ಕಾರ್ಯಕ್ಕೂ ಎಎಸ್‌ಐ ಅನುಮತಿ ಪಡೆಯಲು ಬೆಂಗಳೂರು, ಧಾರವಾಡಕ್ಕೆ ಎಡತಾಕಬೇಕಿತ್ತು. ಇದರಿಂದ ರೋಸಿ ಹೋಗಿದ್ದೆವು. ಸರ್ಕಾರ ಸಂಪೂರ್ಣ ಜನವಸತಿ ಸ್ಥಳಾಂತರಕ್ಕೆ ಹೊರಟಿರುವುದು ಸಮಾಧಾನ ತಂದಿದೆ’ ಎಂದು ಐಹೊಳೆ ಗ್ರಾಮ ಸ್ಥಳಾಂತರ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಕುರಿ ಹೇಳುತ್ತಾರೆ.

*ವೈಜ್ಞಾನಿಕವಾಗಿ ಮತ್ತೊಂದು ಗ್ರಾಮವನ್ನೇ ಕಟ್ಟಿಕೊಡಲಾಗುವುದು. ತಿಪ್ಪೆ ಹಾಕಲು ಜಾಗ, ಕಣ, ಬಯಲು ಹೀಗೆ ಗ್ರಾಮ್ಯ ಸಂಸ್ಕೃತಿಯ ಎಲ್ಲ ಅಂಶಗಳನ್ನು ಪರಿಗಣಿಸಲಾಗುವುದು

-ಕೆ.ಜಿ.ಶಾಂತಾರಾಮ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.