ADVERTISEMENT

ಆಲಮಟ್ಟಿ-ಬಾಗಲಕೋಟೆ ಜಲಸಾರಿಗೆ: ವರ್ಷ ಕಳೆದರೂ ಆರಂಭಗೊಳ್ಳದ ಕಾಮಗಾರಿ

ಆಲಮಟ್ಟಿ-ಬಾಗಲಕೋಟೆ ಜಲಸಾರಿಗೆ: ಕಟ್ಟಡ ನಿರ್ಮಿಸಲು ಸಿಗದ ಜಮೀನು

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 4:48 IST
Last Updated 28 ಜನವರಿ 2025, 4:48 IST
ಆಲಮಟ್ಟಿ-ಹೆರಕಲ್ ಮಧ್ಯದ ಜಲಮಾರ್ಗದ ನಕ್ಷೆ
ಆಲಮಟ್ಟಿ-ಹೆರಕಲ್ ಮಧ್ಯದ ಜಲಮಾರ್ಗದ ನಕ್ಷೆ   
ಒಂದು ವರ್ಷದ ಹಿಂದೆಯೇ ಟೆಂಡರ್ ಪ್ರಕ್ರಿಯೆ ಪೂರ್ಣ ಅನುದಾನವಿದ್ದರೂ ಆರಂಭಗೊಳ್ಳದ ಕಾಮಗಾರಿ | ಪ್ರವಾಸಿಗರ ಬೇಸರ

ಆಲಮಟ್ಟಿ: ಕೇಂದ್ರ ಸರ್ಕಾರದ ‘ಸಾಗರಮಾಲಾ’ ಯೋಜನೆಯಡಿ ಪ್ರವಾಸೋದ್ಯಮ ಹಾಗೂ ಸ್ಥಳೀಯರ ಸಾರಿಗೆ ಅಗತ್ಯಗಳನ್ನು ಪೂರೈಸಲು ಆಲಮಟ್ಟಿ- ಬಾಗಲಕೋಟೆ ಜಲಸಾರಿಗೆಗೆ ಜೆಟ್ಟಿ, ಟರ್ಮಿನಲ್ ಮತ್ತಿತರ ಮೂಲಸೌಕರ್ಯ ಕಲ್ಪಿಸುವ ಕಟ್ಟಡ ನಿರ್ಮಿಸಲು ನದಿ ತೀರದಲ್ಲಿ ಜಮೀನು ದೊರೆಯದೇ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದ ಬಹುನಿರೀಕ್ಷಿತ ಜಲಸಾರಿಗೆ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವರ್ಷ ಗತಿಸಿದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ.

ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿಯಿಂದ ಸುಮಾರು 25 ಕಿ.ಮೀ ದೂರದ ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಯ ಹೆರಕಲ್ ಬ್ಯಾರೇಜ್‌ವರೆಗೆ ಜಲಸಾರಿಗೆ ಆರಂಭಿಸುವ ಉದ್ದೇಶದಿಂದ ಕರ್ನಾಟಕ ಜಲಸಾರಿಗೆ ಮಂಡಳಿಯು ₹12.2 ಕೋಟಿ ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೂ ಕಾಮಗಾರಿ ಆರಂಭಕ್ಕೆ ಮಾತ್ರ ಈವರೆಗೂ ಮುಹೂರ್ತ ಮಾತ್ರ ಕೂಡಿ ಬಂದಿಲ್ಲ.

ಏನು ಸಮಸ್ಯೆ?: ‘ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದ ಹಿಂಭಾಗದ ಕೃಷ್ಣಾ ನದಿ ತೀರದಲ್ಲಿ ಬೋಟ್‌ಗಳು ನಿಲ್ಲುವ ಜೆಟ್ಟಿ, ಟರ್ಮಿನಲ್ ನಿರ್ಮಿಸುವ ಉದ್ದೇಶವಿತ್ತು. ಆದರೆ, ಅಲ್ಲಿ ಜೆಜೆಎಂ ಅಡಿ ಕುಡಿಯುವ ನೀರಿನ ಜಾಕ್‌ವೆಲ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಅದರ ಪಕ್ಕದ ಜಮೀನು ಕೆಬಿಜೆಎನ್‌ಎಲ್ ಅರಣ್ಯ ಇಲಾಖೆಗೆ ಸೇರಿದ ಜಾಗ ಆಗಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗ ಹೊರತುಪಡಿಸಿ ಆಲಮಟ್ಟಿ ಬಳಿ 4 ಎಕರೆ ಹಾಗೂ ಬಾಗಲಕೋಟೆ ಜಿಲ್ಲೆಯ ಹೆರಕಲ್ ಬಳಿ 2.33 ಎಕರೆ ಜಾಗದ ಅಗತ್ಯವಿದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಾಂಡುರಂಗ ಕುಲಕರ್ಣಿ ತಿಳಿಸಿದರು.

ADVERTISEMENT

‘ಈಗ ಕೆಬಿಜೆಎನ್‌ಎಲ್‌ಗೆ ಜಮೀನು ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಜಮೀನು ದೊರೆತ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

‘ಜಲಾಶಯದ ಹಿನ್ನೀರು ಕಡಿಮೆಯಾಗುತ್ತಾ ಸಾಗುತ್ತದೆ. ಅದಕ್ಕಾಗಿ ಫ್ಲೋಟಿಂಗ್ ಜೆಟ್ಟಿ ನಿರ್ಮಿಸಲಾಗುವುದು. ನೀರು ಸರಿದಂತೆ ಜೆಟ್ಟಿ ಕೂಡ ಮುಂದಕ್ಕೆ ಸರಿಯುತ್ತಾ ಹೋಗುತ್ತದೆ. ಆದರೆ ಟರ್ಮಿನಲ್ ಕಟ್ಟಡಗಳನ್ನು 519.60 ಮೀ. ಗಿಂತಲೂ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಸದ್ಯ ಇಲ್ಲಿಯ ಚಂದ್ರಮ್ಮ ದೇವಸ್ಥಾನದ ಹತ್ತಿರದ ಪ್ರದೇಶ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಶೀಘ್ರವೇ ಜಾಗ ಮಂಜೂರು: ‘ಹೊಸ ಸ್ಥಳ ನಿಗದಿಯಾಗಿ ಕರ್ನಾಟಕ ಜಲಸಾರಿಗೆ ಮಂಡಳಿಯಿಂದ ಇತ್ತೀಚಿಗಷ್ಟೇ ಜಮೀನು ನೀಡುವಂತೆ ಪ್ರಸ್ತಾವ ಬಂದಿದೆ. ತಕ್ಷಣವೇ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಿ ಅನುಮತಿ ನೀಡಲು ಕ್ರಮ ವಹಿಸಲಾಗುವುದು’ ಎಂದು ಆಲಮಟ್ಟಿ ಅಣೆಕಟ್ಟು ವಲಯದ ನೂತನ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಪ್ರತಿಕ್ರಿಯಿಸಿದರು.

‘ಆಲಮಟ್ಟಿ ಹಾಗೂ ಹೆರಕಲ್ ಎರಡು ಕಡೆ ಬೋಟ್‌ಗಳನ್ನು ನಿಲ್ಲಲು ಕಾಂಕ್ರಿಟ್ ಫ್ಲೋಟಿಂಗ್ ಜೆಟ್ಟಿ ನಿರ್ಮಿಸುವುದು, ಎರಡು ಕಡೆ ಬೋಟಿಂಗ್ ಟರ್ಮಿನಲ್ (ಫ್ಲಾಟ್ ಫಾರ್ಮ್) ನಿರ್ಮಿಸುವುದು, ಟಿಕೆಟ್ ಕೌಂಟರ್, ಪ್ರವಾಸಿಗರ ನಿರೀಕ್ಷಣಾ ಕೋಣೆ, ನಿಯಂತ್ರಣಾ ಕೊಠಡಿ, ಆಲಮಟ್ಟಿಯಿಂದ-ಹೆರಕಲ್ ವರೆಗೆ 25 ಕಿ.ಮೀವರೆಗೆ ಬೋಟ್ ಹೋಗಲು ಮಾರ್ಗಗಳು ಸೇರಿ ಹಲವು ಸೌಕರ್ಯ ಕಲ್ಪಿಸುವ ಕಾಮಗಾರಿ ಈ ಯೋಜನೆಯಲ್ಲಿ ಒಳಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಆದರೆ, ಕೇಂದ್ರ ಸರ್ಕಾರದ ಅನುದಾನ ಲಭ್ಯವಾದರೂ, ಜಮೀನು ಮಂಜೂರಿಯಲ್ಲಿ ವಿಳಂಬದ ಕಾರಣ ಪ್ರತಿಷ್ಠಿತ ಯೋಜನೆ ಕುಂಟುತ್ತಾ ಸಾಗುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಈ ಭಾಗದ ಪ್ರಥಮ ಜಲಸಾರಿಗೆ ಆರಂಭಗೊಳ್ಳುವ ಕಾಲ ದೂರಿಲ್ಲ.

ಕಾಮಗಾರಿ ಶೀಘ್ರ ಆರಂಭಕ್ಕೆ ಎಲ್ಲಾ ಪ್ರಯತ್ನಗಳು ನಡೆದಿವೆ. ಮೂಲ ಸೌಕರ್ಯ ಕಲ್ಪಿಸಿದ ನಂತರ ಆಲಮಟ್ಟಿ-ಹೆರಕಲ್ ಮಧ್ಯೆ ಜಲಸಾರಿಗೆ ನಿರ್ವಹಿಸಲು ಬೋಟಿಂಗ್ ಕಾರ್ಯಾಚರಣೆ ನಡೆಸಲು ಖಾಸಗಿಯವರಿಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗುವುದು
ಪಾಂಡುರಂಗ ಕುಲಕರ್ಣಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರವಾರ

ಪ್ರವಾಸೋದ್ಯಮಕ್ಕೆ ಅನುಕೂಲ

ನದಿ ಪ್ರವಾಸೋದ್ಯಮಕ್ಕೆ ಸಹಾಯಕವಾಗಿ ಆಲಮಟ್ಟಿ ಹಿನ್ನೀರಿನಲ್ಲಿ 10ಕ್ಕೂ ಹೆಚ್ಚು ದ್ವೀಪದಂತಹ ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಒದಗಿಸಲು ಹಾಗೂ ಪ್ರವಾಸಿಗರಿಗೆ ಈ ಜಲಸಾರಿಗೆ ಹೆಚ್ಚು ಆಕರ್ಷಿಸಲಿದೆ ಆಲಮಟ್ಟಿ ಹಿನ್ನೀರಿನ ನಾನಾ ಕಡೆ ಇರುವ ಪಕ್ಷಿ ಸಂರಕ್ಷಣಾ ತಾಣದ ಪ್ರದೇಶಗಳಲ್ಲಿನ ಪಕ್ಷಿ ವೀಕ್ಷಣೆಗೂ ಈ ಜಲಸಾರಿಗೆ ಪೂರಕವಾಗಲಿದೆ. ಆಲಮಟ್ಟಿಯ ಕೃಷ್ಣಾ ತೀರದಲ್ಲಿ ಜಲ ಆಧಾರಿತ ಕ್ರೀಡೆಗಳ (ವಾಟರ್ ಸ್ಪೋರ್ಟ್ಸ್) ಚಟುವಟಿಕೆಗಳ ಬೆಳವಣಿಗೆಯಾಗಲಿದೆ. ಹೆಚ್ಚೆಚ್ಚು ಪ್ರವಾಸಿಗರು ಬರುವುದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಗ್ರಾಮೀಣ ಪ್ರದೇಶದಲ್ಲಿನ ಸಾರಿಗೆ ಸಂಪರ್ಕಕ್ಕೂ ಈ ಜಲಸಾರಿಗೆ ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.