ADVERTISEMENT

ಮುಳುಗಡೆಯಾಗುವ ಹಳ್ಳಿ ಆಸ್ತಿಗೂ ಮೌಲ್ಯ: ಪುನರ್‌ವಸತಿ ಸಂತ್ರಸ್ತರಿಗೇ ಆಯ್ಕೆ ಅವಕಾಶ

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:30 IST
Last Updated 2 ನವೆಂಬರ್ 2025, 4:30 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬಾಗಲಕೋಟೆ: ‘ಮುಳುಗಡೆಯಾಗುವ ಹಳ್ಳಿಗಳಿಗೆ ಪುನರ್‌ ವಸತಿ ಕೇಂದ್ರದ ನಿರ್ಮಾಣದ ಬದಲು, ಆಸ್ತಿ ಮೌಲ್ಯ ನೀಡುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಪುನರ್‌ವಸತಿ ಪರ್ಯಾಯ ನೀತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ಪುನರ್‌ ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಿ ಎರಡು ದಶಕಗಳು ಕಳೆದರೂ ಶೇ 30ರಷ್ಟು ಜನರೂ ಸ್ಥಳಾಂತರವಾಗಿಲ್ಲ. ಮುಳುಗಡೆಯಾಗುವ ಆಸ್ತಿಗೆ ದರ ನಿಗದಿ ಮಾಡಿ, ಆ ಮೌಲ್ಯ ಪಾವತಿಸುವುದು. ಅವರಿಗೆ ಬೇಕಾದಲ್ಲಿ ಮನೆ ನಿರ್ಮಿಸಿಕೊಳ್ಳಬಹುದಾಗಿದೆ’ ಎಂದರು.

‘ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸದಂತೆ ನಾನೂ ಸೇರಿದಂತೆ ಅಧಿಕಾರಿಗಳು ರೈತರು ಹಾಗೂ ಕಾರ್ಖಾನೆಗಳವರೊಂದಿಗೆ ಸಭೆ ಮಾಡಿದ್ದೇವೆ. ರೈತರು ಹಾಗೂ ಸಕ್ಕರೆ ಕಾರ್ಖಾನೆಯವರು ಚರ್ಚಿಸಿ ಬೆಲೆಯ ಬಗೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಎಫ್‌ಆರ್‌ಪಿ ದರ ಕೊಡಿಸಲಾಗುವುದು. ಹಿಂದಿನ ಬಿಲ್‌ ಪಾವತಿ ಮಾಡುವಂತೆ ಕಾರ್ಖಾನೆಗಳವರಿಗೆ ಸೂಚಿಸಿಲಾಗಿದೆ’ ಎಂದು ಹೇಳಿದರು.

ADVERTISEMENT

‘ಬೆಳೆ ವಿಮಾ ಹಣವನ್ನು ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಳ್ಳುವ ಕೆಲಸ ಬಹಳ ದಿನಗಳಿಂದ ನಡೆದಿದೆ. ಈ ಕುರಿತು ತನಿಖೆ ಮಾಡಿ ವರದಿ ನೀಡುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಜಿಲ್ಲೆಯ ಕೆಲವು ಅಂಗಡಿಗಳಲ್ಲಿ ಕನ್ನಡದಲ್ಲಿ ಫಲಕ ಬರೆಸಿಲ್ಲ. ಅಧಿಕಾರಿಗಳು ಪರಿಶೀಲನೆ ಮಾಡಿ, ಕನ್ನಡದಲ್ಲಿ ಫಲಕ ಬರೆಸದವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಮೊದಲಿನಿಂದಲೂ ಹೊಲಗಳಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಈಗ ಅದಕ್ಕೆ ಹೊಲಗಳ ಮಾಲೀಕರು ಅವಕಾಶ ನೀಡದ್ದರಿಂದ ತೊಂದರೆಯುಂಟಾಗುತ್ತಿದೆ. ಸ್ಮಶಾನಕ್ಕೆ ಜಾಗ ಗುರುತಿಸುವ ಕೆಲಸ ನಡೆದಿದೆ’ ಎಂದು ಹೇಳಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ ದಡ್ಡಿ ಇದ್ದರು.

‘ಹೈಕಮಾಂಡ್ ತೀರ್ಮಾನ ಅಂತಿಮ’

‘ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್‌ ಶಾಸಕಾಂಗ ಸಭೆ ನಿರ್ಧರಿಸಲಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ‘ಕಾಂಗ್ರೆಸ್‌ ವಿವಿಧ ರಾಜ್ಯಗಳಲ್ಲಿ ದಲಿತರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿಯು ರಮೇಶ ಜಿಗಜಿನ್ನಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.