
ಅಮೀನಗಡ ಬಸ್ ನಿಲ್ದಾಣದ ಆವರಣದಲ್ಲಿನ ಕಾಂಪೌಂಡ್ ಹತ್ತಿರ ಬಿದ್ದಿರುವ ಕಸದ ರಾಶಿ
ಅಮೀನಗಡ: ಪಟ್ಟಣದ ಬಸ್ ನಿಲ್ದಾಣದಿಂದ ನಿತ್ಯ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬೇರೆ ಬೇರೆ ಸ್ಥಳಗಳಿಗೆ ಸಂಚರಿಸುತ್ತಾರೆ. ಆದರೆ, ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ನಿರ್ವಹಣೆ ಇಲ್ಲದೆ, ಸ್ವಚ್ಛತೆ ಮಾಯವಾಗಿದೆ.
ಪಟ್ಟಣದ ಬಸ್ ನಿಲ್ದಾಣದ ಕಾಂಪೌಂಡಿಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿಯೂ ಮುಳ್ಳಿನ ಗಿಡ, ಕಸದ ರಾಶಿ ಬಿದಿದ್ದು, ಕುಡಿಯುವ ನೀರಿನ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.
ಶೌಚಾಲಯದ ತ್ಯಾಜ್ಯ ನಿರ್ವಹಣೆ ಕೊರತೆಯಿಂದ ಶೌಚಾಲಯದ ಡ್ರೈನೇಜ್ ತುಂಬಿ ತ್ಯಾಜ್ಯ ಕಾಂಪೌಂಡಿಗೆ ಹೊಂದಿಕೊಂಡ ಖಾಲಿ ಜಾಗದಲ್ಲಿ ಹರಿಯುತ್ತಿದ್ದು, ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಈ ಹಿಂದೆ ಸಾರಿಗೆ ಅಧಿಕಾರಿಗಳು ಹಲವು ಬಾರಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾದರೂ, ಅದಕ್ಕೆ ಶಾಶ್ವತ ವ್ಯವಸ್ಥೆ ಮಾಡಿದರೆ ನಿಲ್ದಾಣದಲ್ಲಿ ನಿಲ್ಲುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ನಿಲ್ದಾಣದ ಸುತ್ತಲಿರುವ ಖಾಲಿ ಜಾಗದಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಶೌಚಾಲಯದಲ್ಲಿ ಡ್ರೈನೇಜ್ ತುಂಬಿ ಹೊರಬರುವ ತ್ಯಾಜ್ಯವೊಂದಡೆಯಾದರೆ, ಶೌಚಾಲಯವಿದ್ದರೂ ಸಾರ್ವಜನಿಕರು ಕಾಂಪೌಂಡ್‌ಗೆ ಮೂತ್ರವಿಸರ್ಜನೆ ಮಾಡುತ್ತಾರೆ. ನಿಲ್ದಾಣದ ಹೊರಗಿನ ಹೋಟೆಲ್‌ನವರು ಹಾಕುವ ತ್ಯಾಜ್ಯ ಹಾಗೂ ನೀರು. ಒಟ್ಟಾರೆ ಸ್ವಚ್ಛತೆಗೆ ಸಾರ್ವಜನಿಕರೂ ಸಹಕರಿಸಬೇಕಾದ ಅನಿವಾರ್ಯತೆ ಇದೆ.
ನಿತ್ಯ ನೂರಾರು ಪ್ರಯಾಣಿಕರು ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ದಾಣದಲ್ಲಿಯೇ ನಿಲ್ಲಿಸುತ್ತಾರೆ. ಈ ಹಿಂದೆ ಇದ್ದ ಸಿಬ್ಬಂದಿಗಳಿಂದಲೇ ಸೂಕ್ತ ಪಾರ್ಕಿಂಗ್ ನಿರ್ವಹಣೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಸಿಬ್ಬಂದಿ ಕೊರತೆಯಿಂದ ಪಾರ್ಕಿಂಗ್ ವ್ಯವಸ್ಥೆ ನಿರ್ವಹಣೆಯ ಇಲ್ಲದಂತಾಗಿದೆ. ಹೀಗಾಗಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳು ನಿಲ್ಲುತ್ತಿವೆ. ಇದರಿಂದ ಸಾರಿಗೆ ಇಲಾಖೆಗೂ ಬರುವ ಅಲ್ಪಸ್ವಲ್ಪ ಆದಾಯ ಕಡಿಮೆಯಾಗಿದೆ.
ಕುಡಿಯುವ ನೀರಿಗೆ ಬೇಕು ಸೂಕ್ತ ವ್ಯವಸ್ಥೆ: ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ನಲ್ಲಿ ವ್ಯವಸ್ಥೆ ಇದ್ದರೂ ಸ್ವಚ್ಛತೆ ಇಲ್ಲ. ಕೆಲವರು ಕುಡಿಯುವ ನೀರಿನ ಸ್ಥಳಗಳಲ್ಲಿ ಉಗುಳುವುದು, ಸ್ವಚ್ಛತೆ ಕಾಪಾಡದೆ ನಲ್ಲಿಗಳನ್ನು ಮುರಿದು ಹೋಗುತ್ತಾರೆ. ಇದರಿಂದ ಏನೇ ವ್ಯವಸ್ಥೆ ಮಾಡಿದರೂ ಮಾಡದಂತಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
‘ಶೌಚಾಲಯದ ತ್ಯಾಜ್ಯ ನಿರ್ವಹಣೆಗೆ ಸ್ಥಳೀಯ ಆಡಳಿತದ ಗಮನಕ್ಕೆ ತರಲಾಗಿದೆ. ಒಂದು ವಾರದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ ಮಂಜೂರಾದರೆ ನಿರ್ವಹಣೆ ಸಾಧ್ಯವಾಗುತ್ತದೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಿಲ್ದಾಣದ ಸ್ವಚ್ಛತೆಯ ಸೂಕ್ತ ನಿರ್ವಹಣೆಗೆ ಆದ್ಯತೆ ನೀಡಲಾಗುವುದು’ ಎಂದು ಹುನಗುಂದ ಡಿಪೊ ಮ್ಯಾನೇಜ್ ಅರವಿಂದ ಭಜಂತ್ರಿ ತಿಳಿಸಿದರು.
ನಿಲ್ದಾಣದ ಆವರಣದ ಸ್ವಚ್ಛತೆಗೆ ಗಮನಹರಿಸಲಾಗುವುದು. ಸಿಬ್ಬಂದಿ ಕೊರತೆಯಿಂದಾಗಿ ನಿರ್ವಹಣೆಯಲ್ಲಿ ವ್ಯತ್ಯಾಸವಾಗಿದೆ. ಇರುವ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆಅರವಿಂದ ಭಜಂತ್ರಿ, ಡಿಪೊ ಮ್ಯಾನೇಜರ್, ಹುನಗುಂದ
ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ, ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕುಸಂಗಮೇಶ ಹಳದೂರ, ಪ್ರಯಾಣಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.