ಮಹಾಲಿಂಗಪುರ: ರೈತರಿಗೆ ದನ, ಆಡು ಮತ್ತು ಕುರಿಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಲು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಿಂದ ನಿರ್ಮಿಸಿರುವ ಜಾನುವಾರು ಮಾರುಕಟ್ಟೆ ಪ್ರಾಂಗಣ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಎಪಿಎಂಸಿಯ 7 ಎಕರೆ 24 ಗುಂಟೆ ಜಾಗದಲ್ಲಿ ಜಾನುವಾರು ಮಾರುಕಟ್ಟೆ ಪ್ರಾಂಗಣವನ್ನು 2000ರಲ್ಲಿ ಆರಂಭಿಸಲಾಗಿತ್ತು. ಆದರೆ, ಖರೀದಿದಾರರ ನಿರಾಸಕ್ತಿಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಪ್ರಾಂಗಣ ಬಿಕೋ ಎನ್ನುತ್ತಿದೆ. ಹೀಗಾಗಿ, ಪ್ರಾಂಗಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರೈತರಿಗೆ ಹಾಗೂ ಜಾನುವಾರುಗಳಿಗೆ ಕಲ್ಪಿಸಿದ್ದ ವಿವಿಧ ಸೌಲಭ್ಯಗಳು ಬಳಕೆಯಿಲ್ಲದೆ ಕಸದ ರಾಶಿಯೇ ತುಂಬಿಕೊಂಡಿದೆ.
ಖರೀದಿದಾರ ತಾನು ಖರೀದಿಸಿದ ದನ, ಕರುಗಳಿಗೆ ಸಂಬಂಧಿಸಿದಂತೆ ಪ್ರತಿ ತಲೆಗೆ ₹ 5 ಹಾಗೂ ₹1 ರಂತೆ ಮತ್ತು ಕುರಿ ಅಥವಾ ಆಡು ಇದ್ದಲ್ಲಿ ಪ್ರತಿ ತಲೆಗೆ ₹ 1 ಹಾಗೂ 25 ಪೈಸೆಯಂತೆ ಮಾರುಕಟ್ಟೆ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ಮಾರುಕಟ್ಟೆ ಸಮಿತಿಗೆ ನೀಡುತ್ತಾನೆ. ಹೀಗೆ ಸಂಗ್ರಹವಾದ ಹಣ ಮಾರುಕಟ್ಟೆ ಸಮಿತಿಗೆ ಆದಾಯ ಒದಗಿಸುತ್ತದೆ. ಆದರೆ, ಖರೀದಿದಾರರು ನಿರಾಸಕ್ತಿ ಹೊಂದಿ ನೆರೆಯ ಮೂಡಲಗಿ, ಮುಧೋಳದಲ್ಲಿ ನಡೆಯುವ ಜಾನುವಾರು ಸಂತೆಗಳಿಗೆ ಒಲವು ತೋರಿದ್ದರಿಂದ ಇಲ್ಲಿನ ಪ್ರಾಂಗಣಕ್ಕೆ ದಿಕ್ಕೇ ಇಲ್ಲದಂತಾಗಿದೆ.
ಜಾನುವಾರುಗಳ ಆರೋಗ್ಯ ರಕ್ಷಣೆಗೆ ₹1.77 ಲಕ್ಷ ವೆಚ್ಚದ ಪ್ರಾಂಗಣದಲ್ಲಿ ನಿರ್ಮಾಣಗೊಂಡಿರುವ ಪಶು ಆಸ್ಪತ್ರೆ ಬಿಕೋ ಎನ್ನುತ್ತಿದೆ. ಕೆಲ ದಿನ ಈ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸಲಾಗಿತ್ತು. ನಂತರ ಅದನ್ನೂ ಸ್ಥಗಿತಗೊಳಿಸಲಾಗಿದೆ. ಪಶು ಆಸ್ಪತ್ರೆಯ ಕಿಟಕಿ ಗಾಜುಗಳು ಒಡೆದಿದ್ದು, ಕಟ್ಟಡ ಬೀಳುವ ಹಂತದಲ್ಲಿದೆ.
ಪ್ರಾಂಗಣಕ್ಕೆ ಬರುವ ರೈತರು ಹಾಗೂ ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆಗೆ ₹3.76 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ನೀರಿನ ಟ್ಯಾಂಕ್, ನೀರಿನ ಕೊಳದಲ್ಲಿ ನೀರಿಲ್ಲ. ಈ ಪೈಕಿ ಎರಡು ನೀರಿನ ಟ್ಯಾಂಕ್ ಕುಸಿಯುವ ಸ್ಥಿತಿಯಲ್ಲಿವೆ. ನೀರಿನ ಕೊಳಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ.
ಜಾನುವಾರುಗಳಿಗೆ ಲೋಡಿಂಗ್ ಮತ್ತು ಅನ್‍ಲೋಡಿಂಗ್‍ಗಾಗಿ ₹69 ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ ಎರಡು ಪ್ಲಾಟ್‍ಫಾರ್ಮ ಸುತ್ತ ತ್ಯಾಜ್ಯ ತುಂಬಿಕೊಂಡಿದ್ದು, ಪ್ಲಾಟ್‍ಫಾರ್ಮ ಬಳಿ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ₹1.17 ಲಕ್ಷ ವೆಚ್ಚದಲ್ಲಿ ಗೂಟದ ಕಲ್ಲುಗಳನ್ನು ನಿರ್ಮಿಸಲಾಗಿದೆ. ₹1.19 ಲಕ್ಷ ವೆಚ್ಚದಲ್ಲಿ ದೀಪ ಅಳವಡಿಸಲಾಗಿದೆ. ಆದರೆ, ದೀಪಗಳು ಬೆಳಗದೇ ಇರುವುದರಿಂದ ಸಂಜೆಯಾದರೆ ಸಾಕು ಕತ್ತಲು ಪ್ರದೇಶವಾಗುತ್ತದೆ.
ಜಾನುವಾರುಗಳಿಗೆ ₹2.78 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಎರಡು ಕ್ಯಾಟಲ್ ಶೆಡ್‍ಗಳು ಕುಡುಕರ ನೆಚ್ಚಿನ ತಾಣವಾಗಿದೆ. ಶೆಡ್ ತುಂಬ ಮದ್ಯದ ಬಾಟಲ್‍ಗಳು, ಗುಟಕಾ ಚೀಟಿಗಳೇ ಕಾಣುತ್ತವೆ. ಪ್ರಾಂಗಣದಲ್ಲಿರುವ ಚರಂಡಿ, ಶೌಚಾಲಯ ಕಸದಿಂದ ತುಂಬಿಕೊಂಡಿವೆ. ಪ್ರಾಂಗಣದಲ್ಲಿ 400 ಕ್ಕೂ ಹೆಚ್ಚು ಗಿಡಗಳಿವೆ. ಇತ್ತೀಚೆಗೆ ಕೆಲ ಸಸಿಗಳನ್ನು ನೆಡಲಾಗಿದೆ. ಆದರೆ, ಯಾವುದಕ್ಕೂ ನೀರಿಲ್ಲ. ಸಸಿಗಳು ನೀರಿಲ್ಲದೆ ಒಣಗುತ್ತಿವೆ.
ಪ್ರಾಂಗಣದ ಸುತ್ತ ₹6.42 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ, ಅಲ್ಲಲ್ಲಿ ಕಾಂಪೌಂಡ್ ಒಡೆದಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಪ್ರಾಂಗಣ ಪ್ರವೇಶಿಸುತ್ತಾರೆ. ಮಲ, ಮೂತ್ರ ವಿಸರ್ಜನೆಗೆ ಈ ಅನ್ಯ ಮಾರ್ಗದಿಂದ ಸಾರ್ವಜನಿಕರು ಪ್ರಾಂಗಣಕ್ಕೆ ಆಗಮಿ ಸುತ್ತಾರೆ. ಪ್ರವೇಶ ದ್ವಾರದಲ್ಲಿರುವ ಚೆಕ್ ಪೋಸ್ಟ್ ತುಂಬ ಮದ್ಯದ ಪಾಕೆಟ್‍ಗಳು ಬಿದ್ದಿವೆ. ಪ್ರತಿ ವರ್ಷ ಬಸವ ಜಯಂತಿ ದಿನದಂದು ಐದು ದಿನಗಳವರೆಗೆ ಈ ಪ್ರಾಂಗಣದಲ್ಲಿ ಜಾನುವಾರು ಜಾತ್ರೆ ನಡೆಯುತ್ತಿತ್ತು. ಅದೂ ಸ್ಥಗಿತಗೊಂಡಿದೆ.
‘ಜಾನುವಾರು ಮಾರುಕಟ್ಟೆ ಪ್ರಾಂಗಣದ ಪುನಶ್ಚೇತನ ಅಗತ್ಯವಾಗಿದೆ. ಖರೀದಿದಾರರ ಮನವೊಲಿಸಿದರೆ ಪ್ರಾಂಗಣ ಮತ್ತೆ ಆರಂಭವಾಗುತ್ತದೆ. ಎಪಿಎಂಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಪ್ರಾಂಗಣ ಮರು ಆರಂಭಕ್ಕೆ ಚಿಂತನೆ ಹರಿಸಬೇಕು’ ಎಂದು ರೈತರು ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.