ADVERTISEMENT

17 ದೌರ್ಜನ್ಯ ಪ್ರಕರಣಗಳಿಗೆ ಶಿಕ್ಷೆ: ಸಂಗಪ್ಪ

ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ, ಉಸ್ತುವಾರಿ ಸಮಿತಿ ಸಭೆ  

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:26 IST
Last Updated 1 ಜನವರಿ 2026, 7:26 IST
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು   

ಬಾಗಲಕೋಟೆ: ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಡಿ ದಾಖಲಾದ 178 ಪ್ರಕರಣಗಳ ಪೈಕಿ ಆರು ತಿಂಗಳಲ್ಲಿ 17 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಪ್ರಿಲ್‌ನಿಂದ ಇಲ್ಲಿಯವರೆಗೆ 33 ಪ್ರಕರಣಗಳು ದಾಖಲಾಗಿದ್ದು, ಹಿಂದಿನ ಬಾಕಿ 145 ಸೇರಿ 178 ಪ್ರಕರಣಗಳಿದ್ದವು. ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

47 ದೌರ್ಜನ್ಯ ಪ್ರಕರಣಗಳ ಪೈಕಿ 35 ಪ್ರಕರಣಗಳಿಗೆ ₹58.25 ಲಕ್ಷ ನೊಂದ ಸಂತ್ರಸ್ತರಿಗೆ ನೀಡಲಾಗಿದೆ. ಉಳಿದ 12 ಪ್ರಕರಣಗಳಿಗೆ ಪರಿಹಾರ ಧನ ವಿತರಿಸಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಇಂತಹ ಪ್ರಕರಣಗಳನ್ನು ನಡೆಯದಂತೆ ಕ್ರಮವಹಿಸಲು ತಾಲ್ಲೂಕುವಾರು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ, ಪ್ರತಿ ತಿಂಗಳು ತಾಲ್ಲೂಕುವಾರು ಕಡ್ಡಾಯವಾಗಿ ಜಾಗೃತಿ ಸಭೆ ನಡೆಸಲು ತಿಳಿಸಿದರು.

ADVERTISEMENT

ಗ್ರಾಮ ಪಂಚಾಯಿತಿವಾರು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ25 ರಷ್ಟು ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿಟ್ಟ ಅನುದಾನ ಹಾಗೂ ಶೇ 24.10ರಷ್ಟು ಅನುದಾನದ ಪ್ರಗತಿ ಪರಿಶೀಲಿಸಿದಾಗ ಪರಿಶಿಷ್ಟ ಜಾತಿ ಅನುದಾನ ಶೇ 89.30ರಷ್ಟು, ಪರಿಶಿಷ್ಟ ಪಂಗಡ ವರ್ಗದ ಅನುದಾನ ಶೇ 88.98ರಷ್ಟು ಖರ್ಚಾಗಿದ್ದು, ಉಳಿದ ಅನುದಾನ ಸಂಪೂರ್ಣವಾಗಿ ಖರ್ಚು ಭರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ವಿವಿಧ ನಿಗಮಗಳಲ್ಲಿ ಬಾಕಿ ಇರುವ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಾಲ್ಮೀಕಿ ನಿಗಮದಲ್ಲಿ ಕೊಳವೆ ಕೊರೆಯಲು ಮೂರು ವರ್ಷಗಳಿಂದ ಬಾಕಿ ಉಳಿದಿದ್ದು, ಏಜೆನ್ಸಿಯವರಿಗೆ ಡ್ರಿಲ್ ಮಾಡಿದ ಮೊತ್ತ ಪಾವತಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮೊಬೈಲ್‌ ಕರೆ ಮಾಡಿ ತಿಳಿಸಿದರು.

ದೌರ್ಜನ್ಯ ಕಾಯ್ದೆಗಳ ಕುರಿತು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ಕಾರ್ಯಾಗಾರದ ಅಗತ್ಯವಿದೆ ಎಂದು ಸದಸ್ಯರು ತಿಳಿಸಿದಾಗ, ಕಾರ್ಯಾಗಾರ ಆಯೋಜನೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶ ರಮೇಶ ಚವ್ಹಾಣ ಅವರಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಡಿವೈಎಸ್‍ಪಿ ಗಜಾನನ ಸುತಾರ, ಸರ್ಕಾರಿ ಅಭಿಯೋಜಕ ಬಿ.ಡಿ.ಬಾಗವಾನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ, ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸದಸ್ಯರಾದ ಯಮನಪ್ಪ ಪೂಜಾರ, ಶಿವಾನಂದ ಮಾದರ, ಫಕೀರಪ್ಪ ಮಾದರ, ಬಸವರಾಜ ಪಾತ್ರೋಟ, ಗೋವಿಂದಪ್ಪ ಕೌಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.