ADVERTISEMENT

ಬಾದಾಮಿ: ದುರಸ್ತಿ ಕಾಣದ ನೀರಿನ ಘಟಕಗಳು

ಎಸ್.ಎಂ.ಹಿರೇಮಠ
Published 17 ಮೇ 2025, 5:05 IST
Last Updated 17 ಮೇ 2025, 5:05 IST
ಬಾದಾಮಿ 15ನೇ ವಾರ್ಡ್‌ನಲ್ಲಿ ಕಳಪೆ ಕಾಮಗಾರಿಯಿಂದ ನಳದ ಕೊಳವೆ ಕಿತ್ತಿದೆ
ಬಾದಾಮಿ 15ನೇ ವಾರ್ಡ್‌ನಲ್ಲಿ ಕಳಪೆ ಕಾಮಗಾರಿಯಿಂದ ನಳದ ಕೊಳವೆ ಕಿತ್ತಿದೆ   

ಬಾದಾಮಿ: ತಾಲ್ಲೂಕಿನಲ್ಲಿ ಎರಡು– ಮೂರು ವರ್ಷಗಳ ಹಿಂದೆ ಆರಂಭವಾದ ಶುದ್ಧ ನೀರಿನ ಘಟಕಗಳಲ್ಲಿ ಬಾದಾಮಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ 40ಕ್ಕೂ ಅಧಿಕ ಘಟಕಗಳು ಕೆಟ್ಟಿವೆ. ಅಧಿಕಾರಿಗಳಿಗೆ ಹೇಳಿದರೆ ದುರಸ್ತಿ ಮಾಡಿಸುವುದಾಗಿ ಹೇಳುತ್ತಾರೆ. ಆದರೆ ಇದುವರೆಗೂ ದುರಸ್ತಿಯಾಗದೇ ಜನರಿಗೆ ಶುದ್ಧ ನೀರು ಸಿಗದಂತಾಗಿದೆ’ ಸಾಮಾಜಿಕ ಕಾರ್ಯಕರ್ತ ಎಂದು ಪ್ರವೀಣ ಮೇಟಿ ಆರೋಪಿಸಿದರು.

ಬಾದಾಮಿ ಪಟ್ಟಣದಲ್ಲಿ 2023ರಲ್ಲಿ ಆರಂಭವಾದ  ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಳಪೆ ಕಾಮಗಾರಿಯಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಸಾರ್ವಜನಿಕರ ಮತ್ತು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ದೂರುತ್ತಾರೆ.

‘ಆಲಮಟ್ಟಿ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ರಾಜ್ಯ ನೀರು ಸರಬರಾಜು ಮಂಡಳಿ ಒಳಚರಂಡಿ ಇಲಾಖೆಯಿಂದ ₹227 ಕೋಟಿ ವೆಚ್ಚದ ಕಾಮಗಾರಿಗೆ ಅಂದಿನ ಶಾಸಕ ಸಿದ್ದರಾಮಯ್ಯ 2020ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. 2023 ರಲ್ಲಿ ನೀರು ಪೂರೈಕೆ ಉದ್ಘಾಟನೆಗೆ ಮತ್ತೆ ಅವರೇ ಚಾಲನೆ ನೀಡಿದ್ದರು. ಉದ್ಘಾಟನೆಯಾಗಿ ಮೂರು ವರ್ಷವಾದರೂ ಇನ್ನೂ ಕೆಲವು ವಾರ್ಡ್‌ಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. 24x7 ನೀರು ಪೂರೈಕೆ ಎನ್ನುತ್ತಾರೆ ಆದರೆ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಾರೆ. ನೀರು ಪೂರೈಕೆ ಮಾಡುವುದಕ್ಕೆ ನಿಗದಿತ ಸಮಯವಿಲ್ಲ’ ಎಂದು ಪುರಸಭೆ ಸದಸ್ಯ ನಾಗರಾಜ ಕಾಚಟ್ಟಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ತರಾತುರಿಯಲ್ಲಿ ಪಟ್ಟಣಕ್ಕೆ ನೀರು ಪೂರೈಕೆ ಯೋಜನೆ ಉದ್ಘಾಟಿಸಲಾಯಿತು. 24x7 ನೀರಿನ ಯೋಜನೆ ಬಗ್ಗೆ ಪುರಸಭೆಯಲ್ಲಿ ಎರಡು ಬಾರಿ ಸಭೆ ಕರೆಯಲಾಗಿತ್ತು. ಅಧಿಕಾರಿಗಳು ಕಾಮಗಾರಿಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

‘ವಾಲ್ ಸರಿಯಾಗಿ ನಿರ್ಮಿಸದ ಕಾರಣ ನೀರು ವ್ಯರ್ಥವಾಗಿ ಹರಿಯುತ್ತಿದೆ. ಹಳೇ ನಳ ಮತ್ತು ಹೊಸ ನಳದ 24x7 ನೀರು ಪೂರೈಕೆಯಿಂದ ನೀರು ವ್ಯರ್ಥವಾಗಿ ಪೋಲಾಗುತ್ತದೆ. ನಳಕ್ಕೆ ಮೀಟರ್ ಅಳವಡಿಸಿದ್ದಾರೆ ಆದರೆ ಅದು ಕಾರ್ಯ ಆರಂಭಿಸಿಲ್ಲ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್.ವಾಸನ ಆರೋಪಿಸಿದರು.

‘ಶಾಶ್ವತ ಕುಡಿಯುವ ನೀರಿನ ಯೋಜನೆಯಲ್ಲಿ ಪಟ್ಟಣದಲ್ಲಿ ಒಟ್ಟು 7,500 ಮನೆಗಳಿಗೆ ನಳ ಜೋಡಿಸಬೇಕು. ಮೆಹಬೂನ ನಗರ ಮತ್ತು ಮಂಜುನಾಥ ನಗರದ ಕೆಲವು ಮನೆಗಳಿಗೆ ನಳದ ಜೋಡಣೆಯ ಕೊಳವೆಗಳನ್ನು ಹಾಕಿಲ್ಲ. ಜೋಡಿಸಿದ ನಳಗಳು ಕಳಪೆ ಕಾಮಗಾರಿಯಿಂದ ಕಿತ್ತು ಹೋಗಿವೆ. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ಎಂದು ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪುರಸಭೆಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ತಿಳಿಸಿದರು.

‘ಪಟ್ಟಣದಲ್ಲಿ 23 ವಾರ್ಡ್ ಸೇರಿ ನೀರು ಪೂರೈಕೆಗೆ ಮೂರು ಜನ ಸಿಬ್ಬಂದಿ ಮಾತ್ರ ಇದ್ದಾರೆ. ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕು ’ ಎಂದು ಹೇಳಿದರು.

ಬಾದಾಮಿ ತಾಲ್ಲೂಕಿನ ಅನಂತಗಿರಿ ತಾಂಡೆದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಎರಡೂ ವರ್ಷವಾದರೂ ಆರಂಭಿಸಿಲ್ಲ
ಶಾಶ್ವತ ಕುಡಿಯುವ ನೀರಿನ ಯೋಜನೆ ಪುರಸಭೆಗೆ ಇನ್ನೂ ಹಸ್ತಾಂತರವಾಗಿಲ್ಲ. ಪಟ್ಟಣದಲ್ಲಿ ಜನರಿಗೆ 80 ಕೊಳವೆ ಬಾವಿಗಳಿಂದ ನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ತೊಂದರೆ ಇಲ್ಲ
ಬಿ.ಎಂ.ಡಾಂಗೆ, ಪುರಸಭೆ ಮುಖ್ಯಾಧಿಕಾರಿ
ಪುರಸಭೆಗೆ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಸ್ತಾಂತರ ಮಾಡಿಲ್ಲ. ಉಳಿದ ಕಾಮಗಾರಿ ಬಗ್ಗೆ ಪರಿಶೀಲಿಸಲಾಗುವುದು. ಐದು ವರ್ಷ ನಾವೇ ನಿರ್ವಹಣೆ ಮಾಡುತ್ತೇವೆ
ಗುರುರಾಜ, ಎಂಜಿನಿಯರ್‌ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.