ADVERTISEMENT

ಬಾದಾಮಿ: ಅಭಿವೃದ್ಧಿ ಪಥದಲ್ಲಿ ಸಾರಿಗೆ ಸಂಸ್ಥೆ

ಎಸ್.ಎಂ.ಹಿರೇಮಠ
Published 4 ಡಿಸೆಂಬರ್ 2025, 4:10 IST
Last Updated 4 ಡಿಸೆಂಬರ್ 2025, 4:10 IST
ಬಾದಾಮಿ ರಸ್ತೆ ಸಾರಿಗೆ ಘಟಕದಲ್ಲಿ ವ್ಯವಸ್ಥಾಪಕ ಅಶೋಕ ಕೋರಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಮಾಹಿತಿ ನೀಡುತ್ತಿರುವರು.
ಬಾದಾಮಿ ರಸ್ತೆ ಸಾರಿಗೆ ಘಟಕದಲ್ಲಿ ವ್ಯವಸ್ಥಾಪಕ ಅಶೋಕ ಕೋರಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಮಾಹಿತಿ ನೀಡುತ್ತಿರುವರು.   

ಬಾದಾಮಿ: ಸ್ಥಳೀಯ ರಸ್ತೆ ಸಾರಿಗೆ ಸಂಸ್ಥೆಯ ಘಟಕವು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಸಾರಿಗೆ ಸಂಸ್ಥೆಗೆ ಹೆಮ್ಮೆ ಮತ್ತು ಪ್ರಯಾಣಿಕರಲ್ಲಿ ಅಭಿಮಾನ ಮೂಡಿಸಿದೆ.

ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಬಸ್ ಸಂಚಾರದ ಅನುಕೂಲ, ನಿಲ್ದಾಣದ ಹೊರಗೆ ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ಸ್ವಚ್ಛತೆ, ಐತಿಹಾಸಿಕ ಸ್ಮಾರಕಗಳ ಫ್ಲೆಕ್ಸ್ , ನಿಲ್ದಾಣದಲ್ಲಿ ನೂರಾರು ಗಿಡಗಳ ರಕ್ಷಣೆ, ಸಾರ್ವಜನಿಕರಿಗೆ ಕೆಲವು ಸೂಚನಾ ಫಲಕದಲ್ಲಿ ದೂರವಾಣಿ ಸಂಖ್ಯೆ, ಚಾಲಕರಿಗೆ ಮತ್ತು ಕಂಡಕ್ಟರಿಗೆ ಸೂಚನಾ ಫಲಕಗಳು ಹೀಗೆ ಅನೇಕ ಸೌಲಭ್ಯಗಳನ್ನು ಕಾಣಬಹುದಾಗಿದೆ.

ಸಾರಿಗೆ ಸಂಸ್ಥೆ ಘಟಕದಲ್ಲಿ ಘಟಕ ವ್ಯವಸ್ಥಾಪಕ ಅಶೋಕ ಕೋರಿ ಬೆಳಿಗ್ಗೆ 6 ಗಂಟೆಗೆ ಬಂದರೆ ಸಂಜೆ 8 ರವರೆಗೆ ನಿಲ್ದಾಣದಲ್ಲಿಯೇ ಇದ್ದು ಎಲ್ಲ ಸಿಬ್ಬಂದಿಯ ಸಹಕಾರದೊಂದಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ADVERTISEMENT

‘ ಪ್ರಯಾಣಿಕರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸುವುದೇ ನಮ್ಮ ಧ್ಯೇಯವಾಗಿದೆ. ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಜೊತೆಗಿನ ಸಹಕಾರದಿಂದ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕೊಡಲಾಗಿದೆ ’ ಎಂದು ಘಟಕ ವ್ಯವಸ್ಥಾಪಕ ಅಶೋಕ ಕೋರಿ ಹೇಳಿದರು.

‘ ಬಸ್ ಸಂಚಾರ ಸಮಯದಲ್ಲಿ ಪ್ರಯಾಣಿಕರ ಬಗ್ಗೆ ಕಾಳಜಿ ಇರಲಿ. ಅಪಘಾತ ಸಂಭವಿಸದಂತೆ ಚಾಲನೆ ಮಾಡಿ ಇಂಧನ ಉಳಿತಾಯ ಮಾಡಿದರೆ ಪ್ರಶಸ್ತಿಗಳನ್ನು ಕೊಡಲಾಗುವುದು ’ ಎಂದು ಪ್ರತಿ ನಿತ್ಯ ಬೆಳಿಗ್ಗೆ ಚಾಲಕರಿಗೆ ಇವರು ತಿಳಿವಳಿಕೆ ನೀಡುವರು. ‘ಪ್ರಯಾಣಿಕರು ದೇವರಿದ್ದಂತೆ. ಸಾರಿಗೆ ಸಂಸ್ಥೆಯಲ್ಲಿ ಜನರು ಹೆಚ್ಚು ಪ್ರಯಾಣ ಮಾಡಿದರೆ ಸಾರಿಗೆ ಸಂಸ್ಥೆಯು ಲಾಭದಲ್ಲಿ ಇರುವುದು. ಪ್ರಯಾಣಿಕರ ಜೊತೆಗೆ ಕಂಡಕ್ಟರ್ ಸಹಕಾರದಿಂದ ನಡೆದುಕೊಳ್ಳಿ’ ಎಂದೂ ಆಗಾಗ್ಗೆ ನಿರ್ವಾಹಕರಿಗೆ ಸಲಹೆ ಕೊಡುವರು.  

‘ ಇಂಧನ ಉಳಿತಾಯ ಮಾಡಿದ ಚಾಲಕ ಮತ್ತು ನಿರ್ವಾಹಕರಿಗೆ ಘಟಕದಲ್ಲಿ ನಿತ್ಯ ಪುಷ್ಪವನ್ನು ನೀಡಿ ಗೌರವಿಸಲಾಗುವುದು. ಬೇರೆ ಬೇರೆ ಚಾಲಕರು ಇಂಧನ ಉಳಿತಾಯ ಮಾಡಿದ್ದು ಘಟಕಕ್ಕೆ ಅಧಿಕ ಆದಾಯ ತಂದಿದ್ದಾರೆ. ಶಕ್ತಿ ಯೋಜನೆಯಿಂದ ಘಟಕಕ್ಕೆ ₹ 54 ಲಕ್ಷ ಆದಾಯವಾಗಿದೆ ’ ಎಂದು ಅವರು ಹೇಳಿದರು.

ಅಪಘಾತ ರಹಿತ ಪ್ರಯಾಣಕ್ಕಾಗಿ ಬಸ್ ನಿಲ್ದಾಣದಲ್ಲಿ ಮತ್ತು ಊರಲ್ಲಿ ಬಸ್ ಬಂದಾಗ ಗದ್ದಲ ಮಾಡದೇ ತಾಳ್ಮೆ ಸಹನೆಯಿಂದ ಬಸ್ ಸಂಚಾರ ಮಾಡಿ ಎಂದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಬೀಳಗಿ ಘಟಕದ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿದ್ದಾಗ ರಾಜ್ಯ ಮಟ್ಟದ ಇಂಧನ ಉಳಿತಾಯ ಪ್ರಶಸ್ತಿ ಮತ್ತು ಪಿಸಿಆರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

‘ ನಮ್ಮ ಘಟಕಕ್ಕೆ ಅಶೋಕ ಕೋರಿ ವ್ಯವಸ್ಥಾಪಕರಾಗಿ ಬಂದ ನಂತರ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ ’ ಎಂದು ಚಾಲಕ ಬಸವರಾಜ ಹೊದ್ಲೂರ ಮತ್ತು ನಿರ್ವಾಹಕ ನಾಗರಾಜ ಅಂಬಿಗೇರ ಪ್ರತಿಕ್ರಿಯಿಸಿದರು.

‘ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಮತ್ತು ವಿಭಾಗೀಯ ನಿಯಂತ್ರಣ ಅಧಿಕಾರಿಗಳ ಸಹಕಾರದಿಂದ ಐತಿಹಾಸಿಕ ಬಾದಾಮಿ ರಸ್ತೆ ಸಾರಿಗೆ ಘಟಕವನ್ನು ರಾಜ್ಯದಲ್ಲಿಯೇ ಮಾದರಿ ಘಟಕವನ್ನಾಗಿ ರೂಪಿಸುವ ಯೋಜನೆ ಇದೆ ’ ಎಂದು ಘಟಕ ವ್ಯವಸ್ಥಾಪಕ ತಿಳಿಸಿದರು.

ಬಾದಾಮಿ ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಆದಾಯ ಇಂಧನ ಉಳಿತಾಯ ಮತ್ತು ಸಾರಿಗೆ ಸಂಸ್ಥೆಗೆ ಘನತೆ ಗೌರವ ತಂದಿರುವ ಸಿಬ್ಬಂದಿಯನ್ನು ಘಟಕ ವ್ಯವಸ್ಥಾಪಕರು ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.