
ಬಾದಾಮಿ: ಐತಿಹಾಸಿಕ ಪ್ರವಾಸಿ ತಾಣವಾದ ಬಾದಾಮಿಯಲ್ಲಿ ಮೂರು ತಿಂಗಳಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಉಂಟಾಗಿದ್ದು ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲು ಮತ್ತು ರಸ್ತೆ ದಾಟಲು ಪರದಾಡುತ್ತಿದ್ದಾರೆ.
ಪಟ್ಟಣದಲ್ಲಿರುವ ರಾಜ್ಯ ಹೆದ್ದಾರಿ (ಗದಗ-ಬಾಗಲಕೋಟೆ 57, ರಾಮದುರ್ಗ-ಪಟ್ಟದಕಲ್ಲು 14) ರಸ್ತೆಯ 50 ಅಡಿ ವಿಸ್ತರಣೆಯಲ್ಲಿ ರಸ್ತೆ ವಿಭಜಕ, ರಸ್ತೆಯ ಎರಡೂ ಬದಿ ಬೈಕ್ ನಿಲುಗಡೆ, ಪಾದಚಾರಿ ರಸ್ತೆ ಹಾಗೂ ಚಿಕ್ಕ ಪುಟ್ಟ ಅಂಗಡಿಗಳು ಇವೆ. ಇದೇ ಚಿಕ್ಕ ರಸ್ತೆಯಲ್ಲಿ ವಾಹನಗಳು, ಜನರು ಮತ್ತು ದನಗಳು ಸಂಚರಿಸಬೇಕಿದೆ. ವಾಹನಗಳ ದಟ್ಟಣೆಯಿಂದಾಗಿ ಜನರು ಪ್ರಾಣ ಭೀತಿಯಿಂದ ಸಂಚರಿಸುವಂತಾಗಿದೆ.
ತಾಲ್ಲೂಕಿನ ಮಲಪ್ರಭಾ ನದಿಯಿಂದ ಮರಳು ಸಾಗಣೆ ಮತ್ತು ಕಬ್ಬು ಸಾಗಣೆಗೆ ಲಾರಿ ಮತ್ತು ಟ್ರ್ಯಾಕ್ಟರ್ ಸಂಚಾರ ವಿಪರೀತವಾಗಿದೆ. ಬನಶಂಕರಿದೇವಿ ಜಾತ್ರೆ, ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸಿ ವಾಹನಗಳ ಸಂಖ್ಯೆ ನವೆಂಬರ್‌ನಿಂದ ಜನವರಿವರೆಗೆ ಹೆಚ್ಚು ಸಂಖ್ಯೆಯಲ್ಲಿ ಇರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದೆ.
ಎಪಿಎಂಸಿಯಿಂದ ಅಂಬೇಡ್ಕರ್ ವೃತ್ತ, ಪುಲಿಕೇಶಿ ವೃತ್ತ, ಟಾಂಗಾ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಅಂದಾಜು 1 ಕಿ.ಮೀ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿರುತ್ತದೆ.
ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರ ಸಾಹಸ ಮಾಡಿದರೂ ಬೈಕ್ ಸವಾರರು ಮತ್ತು ಪಾದಚಾರಿಗಳಿಗೆ ಅಪಘಾತ ಆಗುವುದು ದಿನೇ ದಿನೇ ಹೆಚ್ಚುತ್ತಿವೆ.
‘ಪಾದಚಾರಿಗಳ ಸುಗಮ ಸಂಚಾರಕ್ಕೆ ಪಟ್ಟಣದಲ್ಲಿನ ಪಾದಚಾರಿ ರಸ್ತೆಯಲ್ಲಿ ಅಂಗಡಿಗಳನ್ನು ತೆರವು ಮಾಡಬೇಕು. ರಾಜ್ಯ ಹೆದ್ದಾರಿಯನ್ನು ವಿಸ್ತರಣೆ ಮಾಡಬೇಕು. ಸರ್ಕಾರ ರೈಲು ನಿಲ್ದಾಣ ರಸ್ತೆಯ ಕೋಣಮ್ಮ ದೇವಾಲಯದಿಂದ ಹೊರಗೆ ಬೈ ಪಾಸ್ ರಸ್ತೆಯಾದರೆ ಪಾದಚಾರಿಗಳಿಗೆ ಅನುಕೂಲವಾಗುತ್ತದೆ’ ಎಂದು ವರ್ತಕ ಶಂಕರಗೌಡ ಪಾಟೀಲ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಮದುರ್ಗ-ಅಮೀನಗಡ, ಬಾಗಲಕೋಟೆ-ಗದಗ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆ ಕಿರಿದಾಗಿದೆ. ನಿತ್ಯ ವಾಹನಗಳ ಸಂಚಾರ ಸಂಖ್ಯೆ ಅಧಿಕವಾಗಿದೆ.
‘ಪ್ರವಾಸಿ ತಾಣದಲ್ಲಿ ಮರಳು ಲಾರಿ, ಕಬ್ಬಿನ ಲಾರಿ ಮತ್ತು ಪ್ರವಾಸಿಗರ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಸ್ಥಳೀಯ ಪಾದಚಾರಿಗಳಿಗೆ ಅಷ್ಟೇ ಅಲ್ಲದೇ ಪ್ರವಾಸಕ್ಕೆ ಬರುವ ಶಾಲಾ ಮಕ್ಕಳಿಗೂ ತೊಂದರೆಯಾಗಿದೆ ಬೈ ಪಾಸ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೈ ಪಾಸ್ ರಸ್ತೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆವೈ.ಎಫ್. ಆಡಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.