ಬಾದಾಮಿ: ದಕ್ಷಿಣ ಬೆಟ್ಟದ ಸಾಲಿನಲ್ಲಿರುವ ಜೈನ ಬಸದಿಯ (ಗುಹಾಂತರ ದೇವಾಲಯ) ಕೆಳಗಿನ ಬೆಟ್ಟದಲ್ಲಿ ಭೂ ಉತ್ಖನನ ಕಾರ್ಯ ಭರದಿಂದ ನಡೆದಿದೆ. ಬುಧವಾರ ನಡೆದ ಭೂ ಉತ್ಖನನದಲ್ಲಿ ಮಣ್ಣಿನ ಮಡಿಕೆಯಲ್ಲಿ ಮಾನವನ ಎಲವು ಮತ್ತು ನಾಣ್ಯ ಪತ್ತೆಯಾಗಿದೆ.
ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಚಾಲುಕ್ಯರ ಸ್ಮಾರಕಗಳ ಪರಿಸರದಲ್ಲಿ ಪ್ರಥಮವಾಗಿ ಉತ್ಖನನ ಕಾರ್ಯವನ್ನು ಕೈಗೊಳ್ಳಲಾಗಿದೆ.
6 ನೇ ಶತಮಾನದಲ್ಲಿ ಚಾಲುಕ್ಯ ದೊರೆಗಳು ಇಲ್ಲಿ ನಾಲ್ಕು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆರಂಭದಲ್ಲಿ 1 ನೇ ಗುಹೆ ಶೈವ, 2 ,3 ಗುಹೆಗಳು ವೈಷ್ಣವ, ನೈಸರ್ಗಿಕ ಗುಹೆಯಲ್ಲಿ ಬುದ್ಧನ ಮೂರ್ತಿ ಕೆತ್ತಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 4 ನೇ ಗುಹೆ ಜೈನ ಬಸದಿಯಾಗಿದೆ. ಚಾಲುಕ್ಯ ಅರಸರು ಸರ್ವಧರ್ಮ ಸಹಿಷ್ಣುಗಳಾಗಿದ್ದರು ಎಂಬುದಕ್ಕೆ ಗುಹಾಂತರ ದೇವಾಲಯಗಳ ಮೂರ್ತಿಶಿಲ್ಪಗಳೇ ಸಾಕ್ಷಿಯಾಗಿವೆ ಎಂದು ಹೇಳಬಹುದು.
‘ಜೈನ ಬಸದಿ ಕೆಳಗೆ ಬೆಟ್ಟದಲ್ಲಿ ಸಂಪೂರ್ಣವಾಗಿ ಮುಳ್ಳುಕಂಟಿಗಳು ಬೆಳೆದಿದ್ದವು. ಸ್ವಚ್ಛತೆ ಕೈಗೊಂಡಾಗ ಬಂಡೆಗಲ್ಲಿನಲ್ಲಿ ಕೊರೆದ ಮೆಟ್ಟಿಲುಗಳು ಕಂಡು ಬಂದಿವೆ. ಅಗಸ್ತ್ಯತೀರ್ಥದ ವರೆಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಮೆಟ್ಟಿಲನ್ನು ಶೋಧ ಮಾಡುವಾಗ ಮಣ್ಣಿನ ಮಡಿಕೆಯಲ್ಲಿ ಮಾನವನ ಎಲವುಗಳು ಮತ್ತು ಒಂದು ನಾಣ್ಯ ಪತ್ತೆಯಾಗಿದೆ ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ 'ಪ್ರಜಾವಾಣಿ’ಗೆ ತಿಳಿಸಿದರು.
ಮಣ್ಣಿನ ಮಡಿಕೆಯಲ್ಲಿ ದೊರೆತ ಮಾನವನ ಮೂಳೆಗಳು ಮತ್ತು ಒಂದು ನಾಣ್ಯವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದರು.
ಜೈನರು ಬಸದಿಗೆ ಹೋಗಲು ಚಾಲುಕ್ಯ ದೊರೆಗಳು ಪ್ರತ್ಯೇಕವಾಗಿ ಬೆಟ್ಟದಲ್ಲಿ ಬಸದಿಯಿಂದ ಅಗಸ್ತ್ಯತೀರ್ಥದ ವರೆಗೆ ಮೆಟ್ಟಿಲುಗಳನ್ನು ನಿರ್ಮಿಸಿದ್ದರು ಎಂಬುದಕ್ಕೆ ಭೂ ಉತ್ಖನನದಲ್ಲಿ ದೊರೆತ ಮೆಟ್ಟಿಲುಗಳು ಸಾಕ್ಷಿಯಾಗಿವೆ ಎಂದು ತಿಳಿಸಿದರು.
ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ ಜೈನ ಬಸದಿಗಳು ಶೈವ ಮತ್ತು ವೈಷ್ಣವ ದೇವಾಲಗಳಿಂದ ದೂರ ಇರುವಂತೆ ಬಾದಾಮಿಯಲ್ಲಿಯೂ ಕೊನೆಗೆ ಜೈನ ಬಸದಿ ನಿರ್ಮಿಸಿ ಪ್ರತ್ಯೇಕ ಮೆಟ್ಟಿಲುಗಳನ್ನು ಮಾಡಿದ್ದು ಯಾಕೆ ಎಂಬುದು ಇತಿಹಾಸ ವಿದ್ವಾಂಸರು ಶೋಧಿಸಬೇಕಿದೆ.
ಜೈನ ಬಸದಿ ಕೆಳಗೆ ಬೆಟ್ಟದಲ್ಲಿ ಮೆಟ್ಟಿಲುಗಳ ಪತ್ತೆ ಎಲುಬು ಮತ್ತು ನಾಣ್ಯ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಪ್ರತ್ಯೇಕ ರಸ್ತೆ ಯಾಕೆ ಶಂಶೋಧಕರಿಗೆ ಆಹ್ವಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.