ADVERTISEMENT

ಕನ್ನಡ ನಶಿಸಿ ಹೋಗುವ ಭಾಷೆಯಲ್ಲ: ವೆಂಕಟಗಿರಿ ದಳವಾಯಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:15 IST
Last Updated 24 ನವೆಂಬರ್ 2025, 4:15 IST
ಬಾಗಲಕೋಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇಸಿ ಕನ್ನಡ ಕಲರವ ಸಂಘವನ್ನು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಉದ್ಘಾಟಿಸಿದರು
ಬಾಗಲಕೋಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇಸಿ ಕನ್ನಡ ಕಲರವ ಸಂಘವನ್ನು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಉದ್ಘಾಟಿಸಿದರು   

ಬಾಗಲಕೋಟೆ: ‘ಕನ್ನಡ ನೆಲದ ಇತಿಹಾಸ, ಪರಿಸರ ಮತ್ತು ಮೂಲಗಳನ್ನು ತಿಳಿದುಕೊಳ್ಳುವುದು ಅವಶ್ಯ. ಭಾವುಕತನವಿಲ್ಲದೇ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಅಸಾಧ್ಯ. ಕನ್ನಡಕ್ಕೆ ದೊಡ್ಡ ಪರಂಪರೆ ಇದ್ದು, ಅದು ನಶಿಸಿ ಹೋಗುವ ಭಾಷೆಯಲ್ಲ’ ಎಂದು ಹಂಪಿ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಹೇಳಿದರು.

ಬಸವೇಶ್ವರ ‌ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ‘ಬಿಇಸಿ ಕನ್ನಡ ಕಲರವ’ ಕನ್ನಡ ಸಂಘ ಉದ್ಘಾಟಿಸಿ, ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ‘ಕನ್ನಡ ಸಂಬಂಧಗಳನ್ನು ಬೆಸೆಯುವ ಭಾಷೆ. ಕನ್ನಡ ನಾಡಿನ ಪರಂಪರೆ, ವೈಭವಗಳನ್ನು ನೆನೆಯುತ್ತಾ ಸರ್ಕಾರ ಮಾತೃಭಾಷೆಗೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಅನೇಕ ಅನ್ಯಭಾಷಿಕರೂ ಕನ್ನಡ ಬೆಳವಣಿಗೆಗೆ ಶ್ರಮಿಸಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಾಹಿತಿಗಳಷ್ಟೇ ಅಲ್ಲ, ವಿಜ್ಞಾನಿಗಳು, ತಂತ್ರಜ್ಞರು, ಕೃಷಿಕರ ಪಾತ್ರವೂ ಮಹತ್ವದ್ದಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನ ಸಾಕಷ್ಟು ಬೆಳೆದರೂ, ಮನಸ್ಸಿಗೆ ತಟ್ಟುವುದು ಮತ್ತು ನಿಜವಾಗಿ ಅರ್ಥವಾಗುವುದು ಮಾತೃಭಾಷೆಯಲ್ಲಿ’ ಎಂದು ಅವರು ನುಡಿದರು.

ADVERTISEMENT

ಅತಿಥಿಯಾಗಿದ್ದ ಸಾಹಿತಿ ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ‘ಅಭಿವೃದ್ಧಿಗೆ ಇಂಗ್ಲಿಷ್ ಮುಖ್ಯವಾದರೂ, ಆತ್ಮಾಭಿಮಾನ ಮತ್ತು ಬೌದ್ಧಿಕ ಬೆಳವಣಿಗೆಗೆ ಕನ್ನಡ ಅತ್ಯಗತ್ಯ. ಭಾಷೆಯೊಂದಿಗೆ ಜ್ಞಾನವೂ ಮಹತ್ವದ್ದಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಿ.ಆರ್. ಹಿರೇಮಠ ಮಾತನಾಡಿ, ‘ಎಂಜಿನಿಯರಿಂಗ್ ಕಲಿಕೆಯನ್ನು ಮಾತೃಭಾಷೆಯಲ್ಲಿ ನೀಡುವ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಸಾಫ್ಟ್‌ವೇರ್ ತಂತ್ರಜ್ಞಾನ ಅಭಿವೃದ್ಧಿ ಪಡಿಸುವತ್ತ ಗಮನಹರಿಸಬೇಕು’ ಎಂದು ಸಲಹೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಿನಾಸಂನ ಹರೀಶ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಭಿನಯಿಸಿದ ‘ಚಿತ್ರಪಟ ರಾಮಾಯಣ’ ಮತ್ತು ‘ಯಾತಕ್ಕಾಗಿ ಶಿಕ್ಷಣ’ ನಾಟಕಗಳು ಪ್ರದರ್ಶನಗೊಂಡವು. ಪ್ರೊ. ಪಿ.ವಿ. ಕುಲಕರ್ಣಿ ಮತ್ತು ಪ್ರಸಾದ ಉಮರ್ಜಿ ಸ್ವರ ತಂಡದಿಂದ ಭಾವಗೀತೆಗಳ ಗಾಯನ ನಡೆಯಿತು.

ಸಿಂಚನ ಮತ್ತು ತಂಡ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಆಶಾರಾಣಿ ಬಿರಾದಾರ ಮತ್ತು ತಂಡ ಬೇಂದ್ರೆ ಹಾಡುಗಳನ್ನು ಹಾಡಿದರು. ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ ಡಾ.ಕೆ. ಚಂದ್ರಶೇಖರ, ವಿಭಾಗಗಳ ಮುಖ್ಯಸ್ಥ ವಿನಯ್ ಕುಪ್ಪಸ್ತ, ಭಾರತಿ ಮೇಟಿ, ಜಯಶ್ರೀ ಮಲ್ಲಾಪುರ, ಎಸ್.ಕೆ. ಪಾಟೀಲ, ಭಾರತಿ ರೇಷ್ಮಿ, ಎಂ.ಎಂ. ಹನುಮಸಾಗರ, ಬಿ.ಜಿ. ಹೊಕ್ರಾಣಿ, ರತ್ನಪ್ರಭ ಅರಗಂಜಿ ರಾಜಶೇಖರ ಕುಕ್ಕುಂದಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.