ADVERTISEMENT

ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:35 IST
Last Updated 25 ಡಿಸೆಂಬರ್ 2025, 7:35 IST
ಬಾಗಲಕೋಟೆಯಲ್ಲಿ ಬುಧವಾರ ನಡೆದ ಬಾಗಲಕೋಟೆ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು
ಬಾಗಲಕೋಟೆಯಲ್ಲಿ ಬುಧವಾರ ನಡೆದ ಬಾಗಲಕೋಟೆ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು   

ಬಾಗಲಕೋಟೆ: ಭಾರತ ಚುನಾವಣಾ ಆಯೋಗದ ನಿದೇರ್ಶನದಂತೆ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ಮತಗಟ್ಟೆಗಳ ತರ್ಕಬದ್ದ ಪುನರ್ ಸಂಘಟಿಸುವ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷದ ಮುಖಂಡರು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. 

2026 ಜ.1 ರಂದು ಅರ್ಹತಾ ದಿನಾಂಕವನ್ನಾಗಿಸಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ತಿದ್ದುಪಡಿ, ವರ್ಗಾವಣೆ ಕಾರ್ಯ ಸಹ ನಡೆಯಲಿದೆ. 2026 ಜನವರಿ 3 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜ.3 ರಿಂದ 24ರವರೆಗೆ ಕಾಲಾವಕಾಶ ನೀಡಲಾಗಿದೆ. ಫೆ.7 ರಂದು ಹಕ್ಕು ಮತ್ತು ಆಕ್ಷೇಪಗಳ ವಿಲೇವಾರಿ ಮಾಡಿ ಫೆ.24 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.

ADVERTISEMENT

ಬಾಗಲಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದ 1,200ಕ್ಕೂ ಹೆಚ್ಚಿಗೆ ಮತದಾರರನ್ನು ಹೊಂದಿರುವ 51 ಮತಗಟ್ಟೆಗಳಿದ್ದು, ಅದರಲ್ಲಿ  ಬಾಗಲಕೋಟೆ ನಗರದಲ್ಲಿ 35, ಹುನಗುಂದ ತಾಲ್ಲೂಕಿನಲ್ಲಿ ಆರು, ಬಾಗಲಕೋಟೆ ಗ್ರಾಮೀಣ ಪ್ರದೇಶದಲ್ಲಿ 10 ಮತಗಟ್ಟೆಗಳಿವೆ. ಇವುಗಳನ್ನು ತರ್ಕಬದ್ದವಾಗಿ ಪುನರ್ ಸಂಘಟಿಸಬೇಕಾಗಿದೆ ಎಂದು ತಿಳಿಸಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಮರಣ ಹೊಂದಿದವರ ಹೆಸರುಗಳನ್ನು ತೆಗೆದುಹಾಕಲು ಹಾಗೂ ಸಾರ್ವಜನಿಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ತಿಳಿಸಿದರು. ಕೆಲವೊಂದು ಮತಗಟ್ಟೆಗಳು 2 ಕಿ.ಮೀ.ಕ್ಕಿಂತ ಹೆಚ್ಚಿಗೆ ದೂರ ಇದ್ದು, ಅವುಗಳನ್ನು ಹತ್ತಿರವಿರುವ ಸರ್ಕಾರಿ ಕಟ್ಟಡಗಳಲ್ಲಿ ಮತಗಟ್ಟೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ವಾಸುದೇವಸ್ವಾಮಿ, ವಿವಿಧ ರಾಜಕೀಯ ಮುಖಂಡರಾದ ಶ್ರೀನಿವಾಸ ಬಳ್ಳಾರಿ, ವೈ.ಆರ್.ಮಾದರ, ಶಿವಾನಂದ ಟವಳಿ, ಯಲ್ಲಪ್ಪ ಸನಕ್ಯಾನವರ, ಕೃಷ್ಣ ಪಾಟೀಲ, ಎಂ.ಬಿ.ಸಿದಗೋನಿ, ಅಬ್ದುಲ್ ಬೆಣ್ಣೂರ, ಶ್ರೀಧರ ನಾಗರಬೆಟ್ಟ, ಅರ್ಜುನ ಹೊಸಮನಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.