
ಲೋಪಗಳಿದ್ದಲ್ಲಿ ಗಮನಕ್ಕೆ ತನ್ನಿರಿ | ಫೆ.7ರ ವರೆಗೆ ಪರಿಶೀಲನೆ | ಫೆ.14ರಂದು ಮತದಾರರ ಅಂತಿಮ ಪಟ್ಟಿ
ಬಾಗಲಕೋಟೆ: ಅನುಮಾನಾಸ್ಪದಗಳಿಗೆ ಅವಕಾಶ ನೀಡದೇ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಸುವ ಕಾರ್ಯ ಆಗಬೇಕು ಎಂದು ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ರೋಲ್ ವೀಕ್ಷಕ ರಾಮಪ್ರಶಾಂತ ಮನೋಹರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಸಂಬಂಧಿಸಿದಂತೆ ಭಾನುವಾರ ಸಂಜೆ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಪೂರ್ವ ಸಿದ್ಧತೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಚುನಾವಣೆ ನಡೆದರೂ ಸಹ ಚುನಾವಣಾ ಪ್ರಕ್ರಿಯೆಗಳನ್ನು ಜಾಗೃತೆಯಿಂದ ನಿರ್ವಹಿಸಬೇಕಾಗುತ್ತದೆ. ಮತದಾರರ ಪಟ್ಟಿ ತಯಾರಿಸುವುದರಿಂದಲೇ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಲೋಪದೋಷಗಳಿದ್ದಲ್ಲಿ ರಾಜಕೀಯ ಪಕ್ಷಗಳು ಗಮನಕ್ಕೆ ತರುವ ಕೆಲಸ ಮಾಡಿದಲ್ಲಿ ಅಂತಹ ದೋಷಗಳನ್ನು ಸರಿಪಡಿಸಿ ಚುನಾವಣೆಯನ್ನು ಸುಗಮವಾಗಿ ಪೂರ್ಣಗೊಳಿಸಬಹುದಾಗಿದೆ. ಅಂತಹ ಯಾವುದೇ ಲೋಪಗಳಿದ್ದಲ್ಲಿ ತಕ್ಷಣ ಗಮನಕ್ಕೆ ತರಬೇಕು ಎಂದು ಹೇಳಿದರು.
2026 ಜ.3ರಿಂದ 31ರ ವೆರೆಗೆ ಫಾರಂ 6ಗೆ ಸಂಂಬಂಧಿಸಿದಂತೆ 4,703, ಫಾರಂ 7ರಡಿ 1,821, ಫಾರಂ 8ರಡು ತಿದ್ದುಪಡಿಗೆ 5,700 ಹಾಗೂ ಫಾರಂ 8ರಡಿ ವರ್ಗಾವಣೆಗೆ ಸಂಬಂಧಿಸಿದಂತೆ 313 ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಇತ್ಯರ್ಥ ಮಾಡಲು ಫೆ.7ರ ವರೆಗೆ ಕಾಲಾವಕಾಶವಿದೆ. ಈಗಾಗಲೇ ಬಿಎಲ್‍ಒಗಳಿಗೆ ತರಬೇತಿ ನೀಡಲಾಗಿದ್ದು, ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಫಾರಂ 6 ಮತ್ತು 7ಕ್ಕೆ ಸಂಬಂಧಿಸಿದ ಆಕ್ಷೇಪಣೆ ಅಥವಾ ಬೇರೆ ವಿಧಾನಸಭಾ ಕ್ಷೇತ್ರದವರು ಇಲ್ಲಿಗೆ ಬರುವ ಸಂಭವ ಇದ್ದಲ್ಲಿ ತಿಳಿಸಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ಲೋಪಗಳನ್ನು ಸರಿಪಡಿಸಿ ಫೆ.14ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ವಾಸುದೇವಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.