
ಬಾಗಲಕೋಟೆ: ಹಿಂಗಾರು ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಸುರಿದಿದ್ದರೂ, ಬಿತ್ತನೆ ಮಾತ್ರ ಮಂದಗತಿಯಲ್ಲಿ ಸಾಗಿದೆ. ಜೋಳದ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದ ರೈತರು, ಈ ವರ್ಷ ಜೋಳದಿಂದ ಕಡಲೆ ಬೆಳೆಯತ್ತ ವಾಲಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,29,813 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 89,709 (ಶೇ40ರಷ್ಟು) ಬಿತ್ತನೆಯಾಗಿದೆ. ಮಳೆ ಬಿಡುವು ನೀಡದ್ದರಿಂದ ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗಿದೆ.
ಜಿಲ್ಲೆಯಲ್ಲಿ 61,234 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ ಕೇವಲ 13,314 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ. ಜೋಳದ ಬಿತ್ತನೆ ಅವಧಿ ಮುಗಿಯುತ್ತಾ ಬಂದಿದ್ದರೂ, ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ.
ಜೋಳ ಬಿತ್ತನೆ ಸಮಯದಲ್ಲಿ ಮಳೆ ಕೊರತೆಯಾಗಿತ್ತು. ಜೊತೆಗೆ ಬೆಲೆಯು ಪ್ರತಿ ಕ್ವಿಂಟಲ್‌ಗೆ ₹3 ಸಾವಿರ ಆಸು–ಪಾಸಿನಲ್ಲಿದೆ. ಉತ್ತಮ ಬೆಲೆಗಾಗಿ ಜೋಳವನ್ನು ವರ್ಷಗಟ್ಟಲೇ ಕಾಯ್ದಿಟ್ಟುಕೊಳ್ಳುವುದು ಸವಾಲಾಗಿರುವ ಕಾರಣ ರೈತರು ಜೋಳ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಕಡಲೆ ಬಿತ್ತನೆಯ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 34,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲೂ ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳೆರಡರಲ್ಲಿಯೇ 23 ಸಾವಿರ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
ಕಡಲೆ ಬಿತ್ತನೆಗೆ ಇನ್ನೂ ಸಮಯವಿರುವುದರಿಂದ ಈ ಬಾರಿ ಕಡಲೆ ಬೆಳೆ ಗುರಿ ಮೀರಿದ ಸಾಧನೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನುಳಿದಂತೆ ಗೋಧಿ ಬಿತ್ತನೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಮಳೆ ಕೊರತೆ: ಜಿಲ್ಲೆಯಲ್ಲಿ ಹಿಂಗಾರು ಮಳೆ ಕೊರತೆಯಾಗಿದೆ. ಅ.23ರವರೆಗೆ 9.2 ಸೆ.ಮೀ. ಮಳೆಯಾಗಬೇಕಿತ್ತು. ಆದರೆ, 2.4 ಸೆ.ಮೀ. ನಷ್ಟು ಮಳೆಯಾಗಿದೆ. ಬಹುತೇಕ ತಾಲ್ಲೂಕುಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಬೀಳಗಿ ತಾಲ್ಲೂಕಿನಲ್ಲಿ ಇದರ ಕೊರತೆ ಹೆಚ್ಚಿದೆ.
ಮೂರು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದೆ. ಹೊಲಗಳಲ್ಲಿ ನೀರು ಹರಿದಾಡಿದೆ. ಈಗ ಮಳೆ ಬಿಡುವು ನೀಡಿದರೆ ಬಿತ್ತನೆ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗಲಿದೆ.
ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ ಮಳೆಯಾಗಿದೆ. ಮಳೆ ಬಿಡುವುದು ನೀಡಿದರೆ ಬಿತ್ತನೆ ಪ್ರಮಾಣ ಹೆಚ್ಚಾಗಲಿದೆಲಕ್ಷ್ಮಣ ಕಳ್ಳೇನ್ನವರ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.