ADVERTISEMENT

ಮಾನವ ಅಭಿವೃದ್ಧಿ ವರದಿ ತಯಾರ ಕಾರ್ಯಾಗಾರ; ನಿಖರ ವರದಿ ನೀಡಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:30 IST
Last Updated 23 ಜನವರಿ 2026, 7:30 IST
ಬಾಗಲಕೋಟೆಯಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಬಾಗಲಕೋಟೆಯಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಬಾಗಲಕೋಟೆ: ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ನಿಖರವಾಗಿ ನೀಡಿದಾಗ ಮಾತ್ರ ಮುಂದಿನ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಂಕಿ–ಅಂಶಗಳೇ ಮುಂದಿನ ಯೋಜನೆಗಳಿಗೆ ಪೂರಕವಾಗಲಿದ್ದು, ನಿಖರವಾದ ವರದಿಗೆ ಸಂಬಂಧಿಸಿದ ಇಲಾಖೆಗಳು ಮಾಹಿತಿ ಒದಗಿಸಬೇಕು ಎಂದರು.

ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಯಾವುದೇ ರೀತಿಯಲ್ಲಿ ವ್ಯರ್ಥವಾಗಬಾರದು. ಸಂಪೂರ್ಣ ಅನುದಾನ ಸದ್ಬಳಕೆಯಾಗಬೇಕು ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯ ಪ್ರಸ್ತುತ ಸ್ಥಿತಿ ಹಾಗೂ ಮುಂದಿನ ಐದು ವರ್ಷಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ದತ್ತಾಂಶ ಸಂಗ್ರಹಿಸಬೇಕು. ಜಿಲ್ಲೆಯ ಸಾಮಾಜಿಕ ಶೈಕ್ಷಣಿಕ, ಆರೋಗ್ಯ, ಕೃಷಿ, ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿದರೆ ಮಾತ್ರ ಜನರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ತಲಾ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. 

ಯೋಜನಾ ಇಲಾಖೆಯ ಮಾನವ ಅಭಿವೃದ್ಧಿ ವಿಭಾಗದ ಜಂಟಿ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ವರದಿಗಾಗಿ 117 ಅಂಶಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳ ಬಳಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಬೆಳೆವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಮಾನವ ಅಭಿವೃದ್ದಿ ವರದಿ ಆಧಾರದ ಮೇಲೆ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಹಂಚಿಕೆ ಆಗುತ್ತದೆ. ಅನುದಾನ ಸರಿಯಾಗಿ ಸದ್ಬಳಕೆಯಾದಾಗ ಮಾತ್ರ ಅಭಿವೃದ್ಧಿ ಸಾದ್ಯ. ತಾಯಂದಿರ ಮರಣ, ಶಿಶು ಮರಣ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆಗಳನ್ನು ನಿಖರವಾಗಿ ದಾಖಲಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ 17 ಮಾನದಂಡಗಳನ್ನು ಗುರುತಿಸಿ ನೀಡಲಾಗಿದೆ. ಅದರ ಆಧಾರದ ಮೇಲೆ ವರದಿ ತಯಾರಿಸಬೇಕು. ಜೀವನದ ಗುಣಮಟ್ಟ ಶಿಕ್ಷಣ ಮತ್ತು ಆರೋಗ್ಯವನ್ನು ಮೂಲ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎಂದರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಆಹೇರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಮುಖ್ಯ ಯೋಜನಾಧಿಕಾರಿ ಎ.ಬಿ. ಅಲ್ಲಮಪ್ರಭು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.