ADVERTISEMENT

ಬಾಗಲಕೋಟೆ| ಕಾಯಕದಿಂದಲೇ ಕೈಲಾಸ ಕಂಡ ಶರಣರು: ಪಿ.ಎಚ್. ಪೂಜಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 2:47 IST
Last Updated 11 ಫೆಬ್ರುವರಿ 2026, 2:47 IST
ಬಾಗಲಕೋಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಶರಣ ಭಾವಚಿತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮತ್ತಿತರರು ಗೌರವ ಸಲ್ಲಿಸಿದರು
ಬಾಗಲಕೋಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಶರಣ ಭಾವಚಿತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮತ್ತಿತರರು ಗೌರವ ಸಲ್ಲಿಸಿದರು   

ಬಾಗಲಕೋಟೆ: ‘ಮಾನವೀಯ ಮೌಲ್ಯಗಳೊಂದಿಗೆ ಸತ್ಯ, ನಿಷ್ಠೆ ಕಾಯಕ ಮಾಡಿ ಕೈಲಾಸ ಕಂಡವರು 12ನೇ ಶತಮಾನದ ಶರಣರು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಾದಾರ ಚೆನ್ನಯ್ಯ, ಮಾದರ ಧೂಳಯ್ಯ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಎಂಬ ಶರಣರು ಕಾಯಕ ಜೀವಿಗಳಾಗಿದ್ದು, ಅವರು ಮಾಡುವ ಕಾಯಕ ನಿಷ್ಠೆಯಿಂದ ಮಾಡುವುದಲ್ಲದೇ ಬಸವಾದಿ ಶರಣರ ಪ್ರೀತಿಗೆ ಪಾತ್ರರಾಗಿದ್ದರು’ ಎಂದರು.

ADVERTISEMENT

‘ಮೇಲು– ಕೀಳುಗಳೆಂಬ ಅನಾಚಾರಗಳಿಂದ ಕೂಡಿದ ಅಂದಿನ ದಿನಗಳಲ್ಲಿ ಎಲ್ಲರನ್ನೂ ಭೇದ ಭಾವವಿಲ್ಲದೆ ವಿಶ್ವಾಸಕ್ಕೆ ಪಡೆದು ಎಲ್ಲರ ಪಾಲಿನ ಅಣ್ಣನಾಗಿದ್ದ ಬಸವಣ್ಣ ಇಂದು ವಿಶ್ವ ಮಾನವ ಸ್ಥಾನದಲ್ಲಿದ್ದಾರೆ. ಇಂತಹ ಶರಣರು ನಮ್ಮ ನೆಲದಲ್ಲಿ ಆಗಿ ಹೋಗಿದ್ದು, ನಮ್ಮೆಲ್ಲರ ಭಾಗ್ಯ’ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ದಡ್ಡಿ ಮಾತನಾಡಿ, ‘ಜಾತಿ ವ್ಯವಸ್ಥೆಯಲ್ಲಿ ಕಾಯಕ ನಿಷ್ಠೆ ತೋರಿ ಸತ್ಯಶರಣ ನೆನೆಸಿದವರು ಕಾಯಕ ಶರಣರು. ಅವರ ಮಾತುಗಳು ವಚನಗಳಾಗಿ ದಾರಿದೀಪಗಳಾಗಿವೆ. ಅವರೆಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು’ ಎಂದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಕಲ್ಯಾಣದಲ್ಲಿಯ ಮಹಾಮನೆ ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ಪ್ರಜಾಪ್ರಭುತ್ವದ ಕೇಂದ್ರವಾಗಿತ್ತು. ಅಲ್ಲಿ ಅಸ್ಪ್ರಶ್ಯರೆನಿಸಿಕೊಂಡವರಲ್ಲದೇ ಅಕ್ಕಮಹಾದೇವಿಯಂತವರಿಗೂ ಅವಕಾಶ ಒದಗಿಸಿ ಕೊಟ್ಟು ಎಲ್ಲರೂ ಸಮಾನರು ಎಂಬುದನ್ನು ತೋರಿಸಲಾಗಿತ್ತು’ ಎಂದು ತಿಳಿಸಿದರು.

ಉಪನ್ಯಾಸಕ ಚಂದ್ರಶೇಖರ್ ಕಾಳನ್ನವರ, ಕಾಯಕ ಶರಣರ ಜೀವನ ಚರಿತ್ರೆ ಹಾಗೂ ಕಾರ್ಯನಿಷ್ಠೆಯ ಸಮಗ್ರ ಮಾಹಿತಿ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಸಮುದಾಯದ ಮುಖಂಡರಾದ ಮನೋಹರ ಕದಂ, ಯಲ್ಲಪ್ಪ ಸಂಖ್ಯಾನವರ್, ವಿವೇಕಾನಂದ ಗರಸಂಗಿ, ಅಡಿವೆಪ್ಪ ಚಂದಾವರಿ, ಚಂದ್ರಕಾಂತ ಕೇಸ್ನೂರ ಇದ್ದರು.

ಶರಣರ ತತ್ವಗಳು ಪ್ರಚಲಿತವಾಗಬೇಕಾದರೆ ಇಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಬೇಕು
ಪರಶುರಾಮ ಬಸವಣ್ಣ ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.