ಬಾಗಲಕೋಟೆ: ‘ಪಿಎಸ್‌ಐನ 402 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ 545 ಹುದ್ದೆಗಳ ಭರ್ತಿ ನೇಮಕಾತಿ ಹಗರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಅದರಲ್ಲಿ ಈಗಾಗಲೇ 500 ಜನರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆಗ, ಕೋರ್ಟ್ ಆತುರಬಿದ್ದು ಯಾಕೆ ಆದೇಶ ನೀಡಿದಿರಿ. ಕಾಯಬೇಕಿತ್ತು ಎಂದು ಅಭಿಪ್ರಾಯಪಟ್ಟಿತ್ತು. ಅದಕ್ಕೆ ಎಲ್ಲ ಪ್ರಕ್ರಿಯೆ ಮುಗಿಯುವವರೆಗೆ ಕಾಯಲಾಗುತ್ತಿದೆ’ ಎಂದರು.
‘ವಸತಿ ಇಲಾಖೆ, ಸರ್ಕಾರ ದೂಷಿಸುವ ಬದಲು, ಇಂತಹದೇ ಪ್ರಕರಣ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಬೇಕು. ಶಾಸಕ ರಾಜು ಕಾಗೆ ರಾಜೀನಾಮೆ ವಿಷಯದ ಬಗ್ಗೆ ತಿಳಿದುಕೊಳ್ಳುತ್ತೇನೆ. ಪಕ್ಷದ ಶಾಸಕರು ದೂರಿದಾಗ ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಹೇಳಿದರು.
‘ಮನೆ, ಮನೆಗೆ ಪೊಲೀಸ್ ಎಂಬ ಯೋಜನೆಯಡಿ ಗ್ರಾಮ ವಾಸ್ತವ್ಯ ಆರಂಭಿಸಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 500 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಜನರ ಸಂಕಷ್ಟಗಳನ್ನು ಅರಿಯಲಾಗಿದೆ’ ಎಂದರು.
‘₹1.50 ಲಕ್ಷ ಕೋಟಿ ಕಬ್ಬಿಣ ಅದಿರು ಅಕ್ರಮವಾಗಿ ಸಾಗಿಸಲಾಗಿದೆ. ಅದರಿಂದ ಆರೋಪಿಗಳು ಹಲವಾರು ಸಂಪತ್ತುಗಳನ್ನು ಖರೀದಿಸಿದ್ದಾರೆ. ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ. ಕಬ್ಬಿಣ ಅದಿರು ಅಕ್ರಮ ಸಾಗಾಟಗಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಶಾಸಕರ ಖರೀದಿ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು, ಯಾರು ಶಾಸಕರನ್ನು ಖರೀದಿ ಮಾಡಿದ್ದರು. ಮುಂಬೈಗೆ ಯಾರು ಕರೆದುಕೊಂಡು ಹೋಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ತಿರುಗೇಟು ನೀಡಿದರು.
‘ಕಾಂಗ್ರೆಸ್ ಮೀಸಲಾತಿ ವಿರೋಧಿ ಎಂಬುದು ಸುಳ್ಳು ಆರೋಪ. ಹಿಂದುಳಿದ ವರ್ಗದವರಿಗೆ ಸವಲತ್ತು ನೀಡಿ ಮುಖ್ಯವಾಹಿನಿಗೆ ತರಬೇಕು ಎಂಬುದು ಕಾಂಗ್ರೆಸ್ ಉದ್ದೇಶ’ ಎಂದರು.
- ನೇಮಕಾತಿ ಆದೇಶಕ್ಕೆ ಮನವಿ ಬಾಗಲಕೋಟೆ: ಪಿಎಸ್‌ಐ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಆಯ್ಕೆಯಾಗಿರುವ ಅಭ್ಯರ್ಥಿಗಳು ಆಗ್ರಹಿಸಿದರು. ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಕೊಡಲು ಕಾಯ್ದು ನಿಂತಿದ್ದ ಅವರು ಆಯ್ಕೆ ಪ್ರಕ್ರಿಯೆ ದಾಖಲೆಗಳ ಪರಿಶೀಲನೆ ಮುಗಿದು ಮೂರು ತಿಂಗಳುಗಳಾದರೂ ನೇಮಕಾತಿ ಆದೇಶ ನೀಡಿಲ್ಲ ಎಂದು ದೂರಿದರು. 2021ರಲ್ಲಿಯೇ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಬೇರೆ ಪರೀಕ್ಷೆಗಳನ್ನು ಬರೆಯುವುದೇ ಆಗಿದೆ. ಕುಟುಂಬದ ಮೇಲೂ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.