
ಬಾಗಲಕೋಟೆ: ಫೆಬ್ರುವರಿ ಅಂತ್ಯದೊಳಗೆ ಕರ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ ವಸೂಲಾತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿವಾರು ಪ್ರತಿ ದಿನ ನಿರಂತರವಾಗಿ ಮನೆ ಭೇಟಿ ಮಾಡುವ ಮೂಲಕ ಕರ ವಸೂಲಿ ಮಾಡಿ ಶೇ100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕು. ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ನಾಗರಿಕರ ಸಹಕಾರ ಅಗತ್ಯವಾಗಿದೆ. ತೆರಿಗೆ ಸಂಗ್ರಹಣೆಗೆ ವಿಶೇಷ ಒತ್ತು ನೀಡಿ, ಗುರಿ ಆಧಾರಿತ ಕಾರ್ಯಯೋಜನೆಯ ಮೂಲಕ ಉತ್ತಮ ಫಲಿತಾಂಶ ಪಡೆಯಲಾಗಿದೆ ಎಂದರು.
ಆನ್‍ಲೈನ್ ಪಾವತಿ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ಅನುಷ್ಠಾನದಿಂದ ತೆರಿಗೆ ಸಂಗ್ರಹ ಸುಲಭವಾಗಿ ಸಮಯಕ್ಕೆ ಸರಿಯಾಗಿ ನಡೆಯಬೇಕು. ತೆರಿಗೆ ಬಾಕಿದಾರರ ಕುರಿತು ಜಾಗೃತಿ ಅಭಿಯಾನ, ಮನೆ ಮನೆಗೆ ಭೇಟಿ ಹಾಗೂ ಸಭೆಗಳ ಮೂಲಕ ಸಾರ್ವಜನಿಕರಲ್ಲಿ ತೆರಿಗೆ ಪಾವತಿಯ ಮಹತ್ವದ ಅರಿವು ಮೂಡಿಸಬೇಕು ಎಂದು ಹೇಳಿದರು.
ಬಾಗಲಕೋಟೆ ಮತ್ತು ಜಮಖಂಡಿ ಉಪ ವಿಭಾಗದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-1 ಕಾರ್ಯದರ್ಶಿಗಳು, ಕರ ವಸೂಲಾತಿದಾರರಿಗೆ ಮತ್ತು ಸಹಾಯಕ ನಿರ್ದೇಶಕರುಗಳಿಗೆ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಮಖಂಡಿ ಉಪವಿಭಾಗ ಮಟ್ಟದಲ್ಲಿ ಬರುವ ಮುಧೋಳ ಶೇ56.5, ಜಮಖಂಡಿ ಶೇ57.2, ಬೀಳಗಿ ಶೇ57.5 ಹಾಗೂ ರಬಕವಿ ಬನಹಟ್ಟಿ ಶೇ67.9ರಷ್ಟು ವಸೂಲಾತಿ ಮಾಡಿದ್ದು, ಕಡಿಮೆ ಪ್ರಗತಿ ಸಾಧಿಸಿರುವ ತಾಲ್ಲೂಕುಗಳಾಗಿವೆ. ಇನ್ನುಳಿದ ಎರಡು ತಿಂಗಳಲ್ಲಿ ಶೇ100ರಷ್ಟು ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ಬಾಗಲಕೋಟೆ ಉಪವಿಭಾಗದಲ್ಲಿ ಬರುವ ಹುನಗುಂದ ಶೇ42, ಇಳಕಲ್ ಶೇ48, ಬಾದಾಮಿ ಶೇ73.2, ಬಾಗಲಕೋಟೆ ಶೇ64.6 ಮತ್ತು ಗುಳೇದಗುಡ್ಡ ತಾಲ್ಲೂಕಿನಲ್ಲಿ ಶೇ76.6 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ ಹಾಗೂ ಕರ ವಸೂಲಾತಿಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.