ಬಾಗಲಕೋಟೆ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಬಿತ್ತನೆ ಕಾರ್ಯವೂ ಚುರುಕಾಗಿತ್ತು. ವಾರದವರೆಗೆ ಮುಂಗಾರು ದುರ್ಬಲವಾಗಿರಲಿದೆ ಎಂಬುದು ಈಗಾಗಲೇ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಮೂಡಿಸಿದೆ.
ಮೇ ತಿಂಗಳಲ್ಲಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿತ್ತು. ಜಿಲ್ಲೆಯ ಅಲ್ಲಲ್ಲಿ ಬಿತ್ತನೆ ಕಾರ್ಯವನ್ನೂ ರೈತರು ಆರಂಭಿಸಿದ್ದರು. ಈಗಾಗಲೇ ಶೇ 10ಕ್ಕೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ.
‘ಮುಂಗಾರು ದುರ್ಬಲವಾಗಿರುವುದರಿಂದ ಜೂನ್ 10ರವರೆಗೂ ಮಧ್ಯಮ ವೇಗದ ಗಾಳಿಯೊಂದಿಗೆ ಬಹುತೇಕ ಒಣ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೋಡಲ್ ವಿಜ್ಞಾನಿ ರವಿ ಪಾಟೀಲ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿ, ಧಾರವಾಡ, ಹಾವೇರಿ ಕೆಲ ಭಾಗದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಕೆಲವೇ ಕಡೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಮೇ 29 ರಿಂದ ಇಲ್ಲಿಯವರೆಗೆ ಮಳೆಯ ಪ್ರಮಾಣದಲ್ಲಿ ಶೇ60 ರಿಂದ 90ರಷ್ಟು ಕೊರತೆ ಕಂಡು ಬಂದಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದ್ದು, ವಿಜಯಪುರದಲ್ಲಿ ಶೇ 32, ಬಾಗಲಕೋಟೆಯಲ್ಲಿ ಶೇ90, ಹಾವೇರಿಯಲ್ಲಿ ಶೇ 69, ಬಳ್ಳಾರಿಯಲ್ಲಿ ಶೇ100ರಷ್ಟು ಮಳೆ ಕೊರತೆ ಕಂಡು ಬಂದಿದೆ.
ಜೋರಾದ ಗಾಳಿ: ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೋಡಗಳು ಚದುರಿ ಹೋಗುತ್ತಿವೆ. ಮಳೆಯ ವಾತಾವರಣವಾದರೂ, ಕೆಲವೇ ನಿಮಿಷಗಳಲ್ಲಿ ಮತ್ತೆ ವಾತಾವರಣ ತಿಳಿಯಾಗುತ್ತಿದೆ.
ಮುಂಗಾರು ಪೂರ್ವ ಮಳೆ ಜೋರಾಗಿರುವುದರಿಂದ ಹಸಿ ಜಾಸ್ತಿಯಾಗಿದ್ದ ಭೂಮಿಯ ಹಸಿ ಕಡಿಮೆಯಾಗಲು ಸಮಯ ಬೇಕಿದೆ. ಆದರೆ, ಬಿಸಿಲು, ಗಾಳಿ ಬೀಸುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಭೂಮಿಯ ತೇವಾಂಶದಲ್ಲಿ ಬೇಗನೆ ಕಡಿಮೆಯಾಗಬಹುದು. ಅಂತಹ ಕಡೆಗಳಲ್ಲಿ ಬಿತ್ತನೆ ಮಾಡಿದವರಿಗೆ ಸಂಕಷ್ಟ ಎದುರಾಗಲಿದೆ.
‘ಹೆಸರು ಬಿತ್ತನೆ ಮಾಡಿದ ಮೂರ್ನಾಲ್ಕು ದಿನಗಳಲ್ಲಿ ಮಳೆಯಾದರೆ ಒಳ್ಳೆಯದು. ವಿಳಂಬವಾದರೆ, ಅಲ್ಲಲ್ಲಿ ಬೀಜಗಳು ಮೇಲೇಳುವುದಿಲ್ಲ. ಎಲೆಗಳು ಕಪ್ಪಾಗಿ ಬೆಳವಣಿಗೆಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ’ ಎಂದು ವಿಜ್ಞಾನಿ ಪಾಟೀಲ್ ತಿಳಿಸಿದರು.
ತೇವಾಂಶ ಕಡಿಮೆ ಇದ್ದರೆ ಬಿತ್ತನೆಯನ್ನು ಕೆಲ ದಿನಗಳವರೆಗೆ ಮುಂದೂಡಿ. ಮಳೆಯಾದ ನಂತರ ಬಿತ್ತನೆ ಮಾಡಿರಿರವಿ ಪಾಟೀಲ್, ವಿಜ್ಞಾನ ಕೃವಿವಿ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.