ADVERTISEMENT

ಶೇ78.80ರಷ್ಟು ಮುಂಗಾರು ಬಿತ್ತನೆ: ಜಮಖಂಡಿಯಲ್ಲಿ ಅತೀ ಹೆಚ್ಚು

ಅಭಿಷೇಕ ಎನ್.ಪಾಟೀಲ
Published 15 ಜುಲೈ 2019, 19:46 IST
Last Updated 15 ಜುಲೈ 2019, 19:46 IST
ಬಾದಾಮಿ ತಾಲ್ಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಬಿತ್ತನೆಯಲ್ಲಿ ಮಗ್ನರಾಗಿರುವ ರೈತರು
ಬಾದಾಮಿ ತಾಲ್ಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಬಿತ್ತನೆಯಲ್ಲಿ ಮಗ್ನರಾಗಿರುವ ರೈತರು   

ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಜುಲೈ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಶೇ 78.80ರಷ್ಟು ಬಿತ್ತನೆ ಮುಗಿದಿದೆ.

ವಾಡಿಕೆಯಂತೆ ಜುಲೈ 15ರಂದು 106.6 ಮಿ.ಮೀಟರ್ ಮಳೆಯಾಗಬೇಕು, ಆದರೆ, 124.4 ಮಿ.ಮೀ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಕೂಡಾ ಮಳೆಯಾಗುವ ನಿರೀಕ್ಷೆಯಿದೆ. ಇದರಿಂದ ಮುಂಗಾರಿನ ಬಿತ್ತನೆ ಪ್ರಮಾಣವೂ ಹೆಚ್ಚಳವಾಗಲಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 2,65,000 ಹೆಕ್ಟೇರ್‌ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಜುಲೈ 12ರವರೆಗೆ ಒಟ್ಟು 2,08,301 ಸಾಧನೆ ಮಾಡಲಾಗಿದೆ. ಮುಂದಿನ ಅಗಸ್ಟ್‌ವರೆಗೆ ಮಳೆಯಾಗಲಿದ್ದು, ಅಲ್ಲಿಯವರೆಗೂ ಬಿತ್ತನೆ ನಡೆಯಲಿದೆ.

ADVERTISEMENT

‘ಕೆಲವೊಂದು ಭಾಗದಲ್ಲಿ ಮಳೆ ತಡವಾಗಿ ಪ್ರಾರಂಭವಾಗಿದೆ. ಬೀಳಗಿ, ಬಾದಾಮಿ ತಾಲ್ಲೂಕುಗಳಲ್ಲಿ ಬಿತ್ತನೆ ಕಾರ್ಯ ತಡವಾಗಿದ್ದರಿಂದ ಬೀಳಗಿಯಲ್ಲಿ ಅತೀ ಕಡಿಮೆ ಶೇ68.5 ಹಾಗೂ ಬಾದಾಮಿಯಲ್ಲಿ ಶೇ 75.2ರಷ್ಟು ಬಿತ್ತನೆಯಾಗಿದೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ.

ಜಮಖಂಡಿ ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಜೋಳ, ಗೋವಿನ ಜೋಳ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಜುಲೈ ಎರಡನೇ ವಾರದಲ್ಲಿ ಶೇ 88.1ರಷ್ಟು ಮುಗಿದಿದೆ.ಬಾಗಲಕೋಟೆ, ಹುನಗುಂದ ಹಾಗೂ ಮುಧೋಳ ತಾಲ್ಲೂಕಿನಲ್ಲಿ ಕ್ರಮವಾಗಿ ಶೇ 81.4, ಶೇ76.2, ಶೇ76.3ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ಹುನಗುಂದ ಹಾಗೂ ಜಮಖಂಡಿ ತಾಲ್ಲೂಕಿನಲ್ಲಿ ತೊಗರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಹುನಗುಂದ ತಾಲ್ಲೂಕಿನಲ್ಲಿ 9,500 ಹೆಕ್ಟೇರ್ ತೊಗರಿಯ ಗುರಿಯನ್ನು ಇಲಾಖೆ ಹೊಂದಲಾಗಿತ್ತು. ಆದರೆ, ಈಗಾಗಲೇ 11,835 ಹೆಕ್ಟೇರ್ ಹಾಗೂ ಜಮಖಂಡಿಯಲ್ಲಿ 2 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದ್ದು, ಅಲ್ಲಿಯೂ 5,206 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಮುಧೋಳ ತಾಲ್ಲೂಕಿನಲ್ಲಿ ಮಾತ್ರ ಕೇವಲ 85 ಹೆಕ್ಟೇರ್‌ನಲ್ಲಿ ತೊಗರಿಯನ್ನು ಬೆಳೆಯಲಾಗಿದೆ. ಮುಧೋಳ ನೀರಾವರಿ ಸೌಲಭ್ಯದಿಂದಾಗಿ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹತ್ತಿ, ಕಬ್ಬು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಒಟ್ಟು 33 ಸಾವಿರ ಹೆಕ್ಟೇರ್ ಗುರಿಯನ್ನು ಇಲಾಖೆ ಹೊಂದಿದ್ದರೆ, 33,898 ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ’ ಎನ್ನುತ್ತಾರೆ.

*
ಉತ್ತಮ ಮಳೆಯಾಗಿದ್ದರಿಂದ ಜಿಲ್ಲಾದಾದ್ಯಂತ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಮುಂದಿನ ದಿನಗಳಲ್ಲಿ ಚೆನ್ನಾಗಿ ಮಳೆಯಾಗುವ ನಿರೀಕ್ಷೆ ಇದೆ.
-ರಾಜಶೇಖರ ಬಿಜಾಪುರ, ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.