ರಾಂಪುರ(ಬಾಗಲಕೋಟೆ): ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದ ಯೋಧ ರಮೇಶ ನಾಗಪ್ಪ ಬದಾಮಿ (42) ಕಳೆದ ಕೆಲ ದಿನಗಳ ತೀವ್ರ ಅಸ್ವಸ್ಥತೆಯಿಂದ ಸೋಮವಾರ ಮೃತಪಟ್ಟಿದ್ದಾರೆ.
ಜಮ್ಮು ಕಾಶ್ಮೀರ ಶ್ರೀನಗರದ 80ನೆಯ ಬಿ.ಎಸ್.ಎಫ್ ಬಟಾಲಿಯನ್ ದಲ್ಲಿ ಕಳೆದ 18 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ರಮೇಶ, ಕಳೆದ ಮೂರು ತಿಂಗಳ ಹಿಂದೆ ಬ್ರೇನ್ ಟ್ಯೂಮರ್ ಗೆ ಒಳಗಾಗಿ ಶ್ರೀನಗರದಲ್ಲಿಯೇ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೋಮಾ ಸ್ಥಿತಿಯಲ್ಲೇ ಇದ್ದ ರಮೇಶ ಬದಾಮಿ ಸೋಮವಾರ ಕೊನೆಯುಸಿರೆಳೆದರು ಎಂದು ಅವರ ಆರೈಕೆಗೆ ತೆರಳಿದ್ದ ಅವರ ಸಹೋದರ ಗ್ಯಾನಪ್ಪ ತಿಳಿಸಿದರು. ಮೃತ ರಮೇಶ ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಸಹೋದರ, ಸಹೋದರಿಯರು ಇದ್ದಾರೆ.
ಶ್ರೀನಗರದಿಂದ ಮೃತ ದೇಹವನ್ನು ವಿಶೇಷ ವಿಮಾನದಲ್ಲಿ ಬಿಎಸ್ ಎಫ್ ಅಧಿಕಾರಿ ರೇಣುಕರಾಜ್ ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ತಂದ ನಂತರ ಅಲ್ಲಿನ ಬಿಎಸ್ ಎಫ್ ಸೆಂಟರ್‌ನಿಂದ ಮಿಲಿಟರಿ ವಾಹನದಲ್ಲಿ ಬೆಂಗಳೂರಿನ ಬಿಎಸ್ ಎಫ್ ಇನ್‌ಸ್ಪೆಕ್ಟರ್ ಲಾಲಸಾಬ ನದಾಫ ನೇತೃತ್ವದ 10 ಜನ ಯೋಧರ ತಂಡ ರಾತ್ರಿ 8 ಗಂಟೆಗೆ ಬಾಗಲಕೋಟೆಗೆ ತಂದು ಶವಾಗಾರದಲ್ಲಿ ಇರಿಸಲಾಯಿತು.
ಗುರುವಾರ ಬೆಳಿಗ್ಗೆ ಶಿರೂರ ಪಟ್ಟಣದ ಸಿದ್ದೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ರಮೇಶ ಬದಾಮಿ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಬೆಳಿಗ್ಗೆ 10 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.