
ಬಾಗಲಕೋಟೆ: ಜಿಲ್ಲೆಯಲ್ಲಿ ಹಾವು ಮತ್ತು ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಕಣ್ಗಾವಲು ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹಾವು ಕಡಿತದಂತಹ ತುರ್ತು ಪರಿಸ್ಥಿತಿಗಳಲ್ಲಿ ಪ್ರಾಥಮಿಕ ಚಿಕಿತ್ಸೆ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಕ್ತ ಚಿಕಿತ್ಸೆ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಹಾವು ಕಡಿದಾಗ ತಕ್ಷಣ ಚಿಕಿತ್ಸೆ ಪಡೆಯದಿದ್ದರೆ ಜೀವಾಪಾಯ ಸಂಭವಿಸಬಹುದಾದ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.
‘ಜಿಲ್ಲೆಯಲ್ಲಿ 2024ರಲ್ಲಿ 371 ಹಾವು ಕಡಿತದ ಪ್ರಕರಣಗಳಲ್ಲಿ ಆರು ಜನರು ಮೃತಪಟ್ಟಿದ್ದರೆ, 2025ರಲ್ಲಿ 586 ಪ್ರಕರಣಗಳಲ್ಲಿ ನಾಲ್ವರು, 2026ರ ಜನವರಿ ತಿಂಗಳಲ್ಲಿ 37 ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಪ್ರತಿ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಆಂಟಿ- ವನೆಲ್ ಇಂಜೆಕ್ಷನ್‍ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ವಿಷಕಾರಿ ಹಾವು ಕಚ್ಚಿದಾಗ ರಕ್ತ ಪರಿಚಲನೆ ತಡೆಗಟ್ಟುವಂತಹ ಕೈಗಡಿಯಾರ, ಬಳೆ ಉಂಗುರ ಮುಂತಾದವುಗಳನ್ನು ತೆಗೆಯಬೇಕು. ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕೆ ಹೊರತು, ಕಚ್ಚಿದ ಭಾಗದಲ್ಲಿ ಬಟ್ಟೆ ಕಟ್ಟಬಾರದು. ಪ್ರಾಥಮಿಕ ಹಂತದ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ತಿಳಿಸಿದರು.
‘ಇತ್ತೀಚೆಗೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಬೀದಿ ನಾಯಿಗಳ ಬಗ್ಗೆ ಸಾರ್ವಜನಿಕರು ಹಾಗೂ ಮಕ್ಕಳು ಜಾಗೃತಿಯಿಂದ ಇರಲು ಸೂಕ್ತ ತಿಳಿವಳಿಕೆ ನೀಡುವ ಅಗತ್ಯವಿದೆ. ನಾಯಿ ಕಡಿತ ಪ್ರಕರಣಗಳಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಪಶುಪಾಲನಾ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಶಾಲೆಗಳಲ್ಲಿ ಅರಿವು ಮೂಡಿಸಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ.ಎನ್. ಜಿಲ್ಲಾ ಶಸ್ತ್ರಚಿಕಿತ್ಸಕ ಮಹೇಶ ಕೋಣಿ, ಡಾ.ಶಿವನಗೌಡ ಪಾಟೀಲ, ಡಾ.ಸುವರ್ಣ ಕುಲಕರ್ಣಿ, ಡಾ.ಕುಸುಮಾ ಮಾಗಿ ಇದ್ದರು.
‘ಆಸ್ಪತ್ರೆಗಳಲ್ಲಿ ಔಷಧಿಗಳ ಲಭ್ಯತೆ ಸಿಬ್ಬಂದಿ ಕೊರತೆ ಹಾಗೂ ಸೂಕ್ತ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚಿಕಿತ್ಸೆಗೆ ಬಂದಂತಹ ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.