
ಮಹಾಲಿಂಗಪುರ: ಚಿಮ್ಮಡ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶನಿವಾರ ನಡೆದ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಯ 14 ಹಾಗೂ 17ರ ವಯೋಮಿತಿ ಒಳಗಿನ ಬಾಲಕಿಯರ ಎರಡೂ ವಿಭಾಗದಲ್ಲಿ ಬಾಗಲಕೋಟೆ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
14ರ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಚಿಕ್ಕೋಡಿ ತಂಡವನ್ನು 29-32ರಿಂದ ಬಾಗಲಕೋಟೆ ತಂಡ ಸೋಲಿಸಿತು.
ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪ್ರಥಮಾರ್ಧದಲ್ಲಿ 11 ಅಂಕಗಳಿಂದ ಹಿಂದಿದ್ದ ಬಾಗಲಕೋಟೆ ತಂಡ ದ್ವಿತೀಯಾರ್ಧದಲ್ಲಿ ಪುಟಿದೆದ್ದಿತು. ತಂಡದ ರೈಡರ್ ಸೃಷ್ಟಿ ಹುಂಡೇಕಾರ ಕೊನೆ ಕ್ಷಣದಲ್ಲಿ ತಂದ ನಾಲ್ಕು ಅಂಕಗಳ ಸಹಾಯದಿಂದ ಬಾಗಲಕೋಟೆ ತಂಡ ಗೆಲವು ಸಾಧಿಸಿತು.
ಇದಕ್ಕೂ ಮುನ್ನ ಸಮಿಫೈನಲ್‍ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಬಾಗಲಕೋಟೆ ತಂಡ 26-25ರಿಂದ ವಿಜಯಪುರ ತಂಡವನ್ನು ಹಾಗೂ ಚಿಕ್ಕೋಡಿ ತಂಡ 27-24 ರಿಂದ ಬೆಳಗಾವಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
17ರ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಬೆಳಗಾವಿ ತಂಡವನ್ನು 12-31ರಿಂದ ಬಾಗಲಕೋಟೆ ತಂಡ ಸೋಲಿಸಿತು. ಇದಕ್ಕೂ ಮುನ್ನ ನಡೆದ ಸಮಿಫೈನಲ್‍ನಲ್ಲಿ ಬಾಗಲಕೋಟೆ ತಂಡ 10-6ರಿಂದ ಚಿಕ್ಕೋಡಿ ತಂಡವನ್ನು ಹಾಗೂ ಬೆಳಗಾವಿ ತಂಡ 31-12ರಿಂದ ಶಿರಸಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.