
ಬಾಗಲಕೋಟೆ: ಪ್ರಯಾಣಿಕರ ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬೇಕು ಎಂದು ಜಿಲ್ಲಾ ಸಂಚಾರಿ ನಿಯಂತ್ರಕರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾಣ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಭೆಯಲ್ಲಿ ಸೂಚಿಸಿದಂತೆ ಈಗಾಗಲೇ 19 ಟ್ರಿಪ್‍ಗಳನ್ನು ಹೆಚ್ಚಿಗೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಶೌಚಾಲಯಗಳು ಸುಸ್ಥಿತಿಯಲ್ಲಿ ಇಡಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಳ್ಳಲು ಬಸ್ ಚಾಲಕ, ನಿರ್ವಾಹಕರು ಹಾಗೂ ಸಾರ್ವಜನಿಕರ ನಡುವೆ ಕಾರ್ಯಾಗಾರ ನಡೆಸುವ ಅಗತ್ಯವಿದ್ದು, ಕಾರ್ಯಾಗಾರ ಆಯೋಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 4,37,585 ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಗೃಹಬಳಕೆದಾರರಿದ್ದು, 4,29,605 ಗೃಹ ಬಳಕೆದಾರರು ಗೃಹಜ್ಯೋತಿಯಡಿ ನೋಂದಣಿ ಮಾಡಿಕೊಂಡಿದ್ದಾರೆ. 7,980 ಗೃಹ ಬಳಕೆದಾರರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರಿ ಶಾಲೆಗಳೂ ಗೃಹಜ್ಯೋತಿ ಅಡಿಗೆ ಬರುತ್ತಿದ್ದು, ಶಾಲೆಯ ಯುಡೈಸ್ ನಂಬರ್ ನೋಂದಾಯಿಸಿ, ಆ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್‍ಗೆ ಒಟಿಪಿ ಪಡೆದು ಉಚಿತ ವಿದ್ಯುತ್ ಪಡೆಯಬಹುದಾಗಿದೆ ಎಂದು ಹೆಸ್ಕಾಂ ಅಧಿಕಾರಿ ಸಭೆಗೆ ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ 4,24,733 ಫಲಾನುಭವಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 15,25,803 ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಅಕ್ಕಿಯ ಜೊತೆಗೆ ಜೋಳ ಸಹ ವಿತರಣೆ ಮಾಡಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾಹಿತಿ ನೀಡಿದರು.
2024-25ನೇ ಸಾಲಿನಲ್ಲಿ ಅನಧಿಕೃತ ಅಕ್ಕಿ ಸಾಗಾಣಿಕೆ ಹಾಗೂ ದಾಸ್ತಾನು ಮಾಡಿದವರ ಮೇಲೆ ಅವಶ್ಯಕ ವಸ್ತುಗಳ ಕಾಯ್ದೆಯಡಿ 16 ಪ್ರಕರಣಗಳನ್ನು ದಾಖಲಿಸಿ, 1,020 ಕ್ವಿಂಟಲ್ ಅಕ್ಕಿ ಹಾಗೂ 12 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 26 ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಇಂದಿರಾ ಕಿಟ್ ಕೊಡುವ ಚಿಂತನೆ ಸರ್ಕಾರ ಮಟ್ಟದಲ್ಲಿದೆ ಎಂದು ತಿಳಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 22,038 ಯುವಕ, ಯುವತಿಯರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಎಂದು ತಿಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಅನುಷ್ಠಾನ ಸಮಿತಿ ಉಪಾದ್ಯಕ್ಷ ಶಂಕರಪ್ಪ ನೇಗಲಿ, ಜಯಶ್ರೀ ತಿಮ್ಮಾಪುರ, ಶಿವಪ್ಪ ಕೋನೇರಿ, ರಫೀಕ್ ಬೈರಕದಾರ, ರವೀಂದ್ರ ಯಡಹಳ್ಳಿ, ಮಾಗುಂಡಪ್ಪ ಬೂದಿಹಾಳ, ಯಮನಪ್ಪ ಹೆಬ್ಬಳ್ಳಿ, ನೂರಂದಗೌಡ ಕಲಗೋಡಿ, ಮಹಾಂತೇಶ ಹನಮನಾಳ, ಅನವೀರಯ್ಯಾ ಪ್ಯಾಟಿಮಠ, ಮಹಾಂತೇಶ ಮಾಚಕನೂರ, ಬಸವಂತಪ್ಪ ಪಾಟೀಲ, ನೇಮಣ್ಣ ಸಾವಂತನವರ, ಎಸ್.ಎನ್.ರಾಂಪುರ, ಬಾಸ್ಕರ ಬಡಿಗೇರ, ಉಸ್ಮಾನಸಾಬ್, ವಾಸು ಕಡಪಟ್ಟಿ, ವಿಜಯಕುಮಾರ ಶಿರೂರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.