
ಬಾಗಲಕೋಟೆ: ‘ನಾಡಿನ ಹಾಗೂ ವಿಶ್ವದ ಪ್ರಾಚೀನ ಸಂಸ್ಕೃತಿ ತಿಳಿಯಬೇಕಾದರೆ ಹಸ್ತಪ್ರತಿಗಳ ಅಧ್ಯಯನದ ಅವಶ್ಯಕತೆ ಇದೆ’ ಎಂದು ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷ ಪ್ರೊ.ಮಲ್ಲೇಪುರಂ ವೆಂಕಟೇಶ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶನಿವಾರ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾವ್ಯ, ಶಾಸ್ತ್ರ, ನಾಟಕ, ಸಾಹಿತ್ಯ, ಊರಿನ ಸಾಮಾಜಿಕ-ಸಾಂಸ್ಕೃತಿಕ ವಿವರಗಳನ್ನು ಒಳಗೊಂಡ ಬರಹ, ಶಾಸನಗಳನ್ನು ಹಸ್ತಪ್ರತಿ ಎನ್ನುತ್ತೇವೆ’ ಎಂದರು.
‘ಹಳಗನ್ನಡ, ಶಾಸನಗಳು, ಹಸ್ತಪ್ರತಿಗಳು ಜ್ಞಾನದ ಮೂಲ ಬೇರುಗಳಾಗಿವೆ. ಆ ಮೂಲ ಬೇರುಗಳ ಕುರಿತು ಪ್ರಸ್ತುತ ಕಾಲಘಟ್ಟದಲ್ಲಿ ಅಧ್ಯಯನದ ಅವಶ್ಯಕತೆ ಇದೆ. ಇವುಗಳು ದೇಶದ ಆಸ್ತಿಯಾಗಿದ್ದು, ರಕ್ಷಣೆ ಮಾಡುವ ಕೆಲಸ ಆಗಬೇಕು’ ಎಂದು ಹೇಳಿದರು.
ಹಿರಿಯ ವಿದ್ವಾಂಸ ನಾ. ಗೀತಾಚಾರ್ಯ ಮಾತನಾಡಿ, ‘ದೇಶದಲ್ಲಿಯೇ ಹಸ್ತಪ್ರತಿಗಳ ಸಂಗ್ರಹ, ಅವುಗಳ ಅಧ್ಯಯನ ಮಾಡುತ್ತಾ ಸಮ್ಮೇಳನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ. ಈ ಕಾರ್ಯ ಮಾಡುವ ಏಕೈಕ ವಿಶ್ವವಿದ್ಯಾಲಯವಾಗಿದೆ’ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ‘ಹಸ್ತಪ್ರತಿಗಳು ನಮ್ಮ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಹಸ್ತಪ್ರತಿಗಳ ಅಧ್ಯಯನದಲ್ಲಿ ಇಂದಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಹಡಲಗೇರಿ ಸ.ಪ್ರ.ದ.ವಸತಿಯುಕ್ತ ಕಾಲೇಜಿನ ಪ್ರಾಚಾರ್ಯ ಶರಣಗೌಡ ಪಾಟೀಲ, ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ವೀರೇಶ ಬಡಿಗೇರ, ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿದರು.
ಪ್ರಮಾಣಪತ್ರ ವಿತರಣೆ: ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ವಿವಿಧ ಕಾಲೇಜುಗಳ ಉಪನ್ಯಾಸಕರಿಗೆ, ಪ್ರಾಧ್ಯಾಪಕರಿಗೆ, ಸಂಶೋಧನಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ಕಾಲದ ಹಸ್ತಪ್ರತಿಗಳ ಪ್ರದರ್ಶನವು ಗಮನ ಸೆಳೆಯಿತು. ವಿವಿಧ ಗೋಷ್ಠಿಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.