ADVERTISEMENT

ಬಾಗಲಕೋಟೆ: ನಗರಸಭೆಗೂ ಬರುತ್ತಾರಾ ಆಡಳಿತಾಧಿಕಾರಿ?

ಅ.28ಕ್ಕೆ ಈಗಿನ ಆಡಳಿತ ಮಂಡಳಿ ಅವಧಿ ಪೂರ್ಣ

ಬಸವರಾಜ ಹವಾಲ್ದಾರ
Published 20 ಅಕ್ಟೋಬರ್ 2025, 2:25 IST
Last Updated 20 ಅಕ್ಟೋಬರ್ 2025, 2:25 IST
ಬಾಗಲಕೋಟೆ ನಗರಸಭೆ ಕಟ್ಟಡ
ಬಾಗಲಕೋಟೆ ನಗರಸಭೆ ಕಟ್ಟಡ   

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಿ ಹಲವು ವರ್ಷಗಳೇ ಆಗಿವೆ. ಈಗ ಅವುಗಳ ಪಟ್ಟಿಗೆ ಬಾಗಲಕೋಟೆ ನಗರಸಭೆಯೂ ಸೇರಲಿದೆ.

ಅ.28ಕ್ಕೆ ನಗರಸಭೆಯ ಈಗಿನ ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳಲಿದೆ. ಅವಧಿ ಪೂರ್ಣಗೊಳ್ಳಲು ಒಂಬತ್ತು ದಿನಗಳು ಮಾತ್ರ ಉಳಿದಿದ್ದರೂ ವಾರ್ಡ್‌ಗಳ ಮೀಸಲಾತಿ ಪ್ರಕಟವಾಗಿಲ್ಲ. ಇದರಿಂದಾಗಿ ಚುನಾವಣಾ ವೇಳಾಪಟ್ಟಿಯೂ ಪ್ರಕಟವಾಗಿಲ್ಲ.

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಲೇ ಇದೆ. ಅದರ ನಡುವೆ ಈಗ ಬಾಗಲಕೋಟೆಯದ್ದೂ ಸೇರಿದಂತೆ ರಾಜ್ಯದ ಹಲವು ನಗರಸಭೆ ಸಂಸ್ಥೆಗಳ ಅವಧಿ ಪೂರ್ಣಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಆಡಳಿತಾಧಿಕಾರಿಗಳ ನೇಮಕವೇ ಗತಿ ಎನ್ನುವಂತಾಗಿದೆ.

ADVERTISEMENT

2018 ರಲ್ಲಿ ಈಗಿನ ಸದಸ್ಯರು ಆಯ್ಕೆಯಾಗಿದ್ದರು. ಎರಡು ವರ್ಷಗಳವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡದ್ದರಿಂದಾಗಿ ಸದಸ್ಯರಾದರೂ, ಸದಸ್ಯರಲ್ಲದಂತೆ ಇರಬೇಕಾದ ಸ್ಥಿತಿ ಎದುರಾಗಿತ್ತು. ಜನರ ಸಮಸ್ಯೆಗಳಿಗೆ ಉತ್ತರ ಹೇಳಲಾಗದೇ ಪರದಾಡಿದ್ದರು.

ಕೊನೆಗೆ ಎರಡು ವರ್ಷಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಮಾಡಿದ ನಂತರ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಎರಡೂವರೆ ವರ್ಷ ಅವಧಿ ಪೂರ್ಣಗೊಳಿಸಿದ ನಂತರ ಎರಡನೇ ಅವಧಿಗೂ ಮೀಸಲಾತಿ ನಿಗದಿ ಮಾಡದ್ದರಿಂದ 14 ತಿಂಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರಿರಲಿಲ್ಲ.

ಮೀಸಲಾತಿ ನಿಗದಿಯಾಗದ್ದರಿಂದ ಈಗಿನ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಕೇವಲ 11 ತಿಂಗಳಿಗೆ ಪೂರ್ಣಗೊಳ್ಳುತ್ತಿದೆ. ಸರ್ಕಾರದ ಮೀಸಲಾತಿ ವಿಳಂಬ ನೀತಿಯಿಂದಾಗಿ ಪೂರ್ಣಾವಧಿಗೆ ಆಡಳಿತ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ, ಇನ್ನೂ 14 ತಿಂಗಳ ಅವಧಿ ನೀಡಬೇಕು ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜಿಲ್ಲಾ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಆದರೆ, ಅವರು ಜಿಲ್ಲೆಯ ಜನರಿಗೆ ಸಿಗದ್ದರಿಂದ ಜನರು ಪರದಾಡುವಂತಾಗಿದೆ. ತಾಲ್ಲೂಕು ಪಂಚಾಯಿತಿಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಈಗ ಅದೇ ಸಾಲಿಗೆ ನಗರಸಭೆಯೂ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಆಡಳಿತಾಧಿಕಾರಿಯಾದವರು ತಮ್ಮ ಹುದ್ದೆಯ ಜೊತೆಗೆ ಇದನ್ನೂ ನಿಭಾಯಿಸಬೇಕಾಗುತ್ತದೆ.

ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾದ ಸರ್ಕಾರ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪ್ರತಿನಿಧಿಗಳಾಗುವ ಅವಕಾಶ ನೀಡಬೇಕಾದ ಶಾಸಕರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಕಾರ್ಯಕರ್ತರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.