ADVERTISEMENT

ಬಾಗಲಕೋಟೆ | ಈರುಳ್ಳಿ ಬೆಳೆಗೆ ವೈಜ್ಞಾನಿಕ ಸ್ಪರ್ಶ ಅವಶ್ಯ: ಕುಲಪತಿ ವಿಷ್ಣುವರ್ಧನ

ತೋವಿವಿಯಲ್ಲಿ ಈರುಳ್ಳಿ ಬೆಳೆ ಕ್ಷೇತ್ರೋತ್ಸವ: ವಿಷ್ಣುವರ್ಧನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:07 IST
Last Updated 25 ಫೆಬ್ರುವರಿ 2026, 6:07 IST
ಬಾಗಲಕೋಟೆ ತೋವಿವಿಯಲ್ಲಿ ಮಂಗಳವಾರ ನಡೆದ ಈರುಳ್ಳಿ ಬೆಳೆ ಕ್ಷೇತ್ರೋತ್ಸವದಲ್ಲಿ ವಿವಿಯ ಕುಲಪತಿ ವಿಷ್ಣುವರ್ಧನ ಈರುಳ್ಳಿ ಬೆಳೆ ವೀಕ್ಷಿಸಿದರು
ಬಾಗಲಕೋಟೆ ತೋವಿವಿಯಲ್ಲಿ ಮಂಗಳವಾರ ನಡೆದ ಈರುಳ್ಳಿ ಬೆಳೆ ಕ್ಷೇತ್ರೋತ್ಸವದಲ್ಲಿ ವಿವಿಯ ಕುಲಪತಿ ವಿಷ್ಣುವರ್ಧನ ಈರುಳ್ಳಿ ಬೆಳೆ ವೀಕ್ಷಿಸಿದರು   

ಬಾಗಲಕೋಟೆ: ‘ಜಿಲ್ಲೆಯ ಪ್ರಮುಖ ಬೆಳೆಗಳಲ್ಲೊಂದಾದ ಈರುಳ್ಳಿ ಬೆಳೆಗೆ ವೈಜ್ಞಾನಿಕ ಹಾಗೂ ತಾಂತ್ರಿಕತೆ ಅಳವಡಿಸಿಕೊಂಡಾಗ ಮಾತ್ರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ’ ಎಂದು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಹೇಳಿದರು.

ಮಂಗಳವಾರ ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಈರುಳ್ಳಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈರುಳ್ಳಿ ಕೂಡ ಪ್ರಮುಖವಾಗಿದೆ. ಈರುಳ್ಳಿ ಬೀಜ ತಳಿಗಳನ್ನು ಬದಲಾಯಿಸಿ ಕೃಷಿ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ’ ಎಂದರು.

‘ರೈತರಿಗೆ ಸಂಶೋಧನೆಗೊಳಗಾದ ಬೀಜ ದೊರಕದಿರುವುದರಿಂದ ಇಳುವರಿ ಕಡಿಮೆಯಾಗಿರುತ್ತದೆ. ಇದನ್ನು ತಡೆಗಟ್ಟಲು ಉತ್ತಮ ಗುಣಮಟ್ಟದ ಹಾಗೂ ಉತ್ತಮ ತಳಿಯ ಬೀಜಗಳನ್ನೇ ಬಳಸಬೇಕು. ಹೊಲದಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಹಾಕಿ ಸರಿಯಾಗಿ ನಿರ್ವಹಣೆ ಮಾಡಿದರೂ ಸಹ ನಿರೀಕ್ಷೆ ಮಾಡಿದಷ್ಟು ಬೆಳೆ ಬರಲು ಸಾಧ್ಯವಾಗದಿರುವುದಕ್ಕೆ ಕಳಪೆ ಬೀಜಗಳೆ ಕಾರಣ. ಅಂತಹ ಬೀಜಗಳಿಂದ ಹಲವಾರು ರೋಗಗಳೂ ಬರುತ್ತವೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಅನೇಕ ರೈತರು ಉತ್ತಮ ಗುಣಮಟ್ಟದ ಬೀಜ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿದ್ದು, ಆ ಎಲ್ಲ ರೈತರಿಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಕೊಟ್ಟು ಬೀಜೋತ್ಪಾದನೆ ಮಾಡುವ ರೈತರಿಗೆ ಹೆಚ್ಚಿನ ಗುಣಮಟ್ಟದ ಬೀಜ ತಯಾರಿಸಲು ಸಲಹೆ, ಸೂಚನೆ ನೀಡಲು ವಿಶ್ವವಿದ್ಯಾನಿಲಯ ಸದಾ ಸಿದ್ಧವಿದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಕೇವಲ ರಾಸಾಯನಿಕ ಗೊಬ್ಬರಗಳನ್ನೇ ಬಳಸಿ, ಸಾವಯವ ಗೊಬ್ಬರಗಳನ್ನು ಬಳಸದಿರುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಭೂಮಿಯೂ ಹಾಳಾಗುತ್ತದೆ. ರೈತರು ರಾಸಾಯನಿಕ ಗೊಬ್ಬರಗಳ ಕಡೆ ಹೆಚ್ಚು ಗಮನ ನೀಡದೇ ಸಾವಯವ ಕೃಷಿಯತ್ತ ಮುಖ ಮಾಡಬೇಕು’ ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ,  ‘ಮೂರು ವರ್ಷಗಳಿಂದ ಕಳಪೆ ಬೀಜ, ಹವಾಮಾನ ಏರಿಳಿತ ಅಥವಾ ದರ ಸೇರಿದಂತೆ ಒಂದಲ್ಲ ಒಂದು ಸಂಕಷ್ಟವನ್ನು ರೈತರು ಎದುರಿಸುತ್ತಿದ್ದಾರೆ. ಯಾವುದೇ ಬೆಳೆ ಬೆಳೆಯಲು ಬೀಜ ಗುಣಮಟ್ಟದ್ದೇ ಆಗಿರಬೇಕು. ಸೂಕ್ತ ಸಮಯದಲ್ಲಿ ಅವಶ್ಯ ಇರುವಷ್ಟು ಪೋಷಕಾಂಶ ಕೊಡಬೇಕು’ ಎಂದರು.

‘ಕಳೆದ ವರ್ಷ ಒಂದು ಲಕ್ಷ ಎಕರೆಗೂ ಅಧಿಕ ಭೂಮಿಯಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ ಅಷ್ಟೊಂದು ಬೀಜ ನಮ್ಮ ಜಿಲ್ಲೆಯಲ್ಲಿ ದೊರಕುವುದಿಲ್ಲ. ತೋವಿವಿಯ ಭೀಮ ಬ್ರಾಂಡಿನ ಬೀಜ ತಯಾರಿಕೆ, ನಿರ್ವಹಣೆಯನ್ನು ರೈತರ ಜಮೀನಿನಲ್ಲೇ ಮಾಡಲು ಅವಕಾಶ ಕೊಡಬೇಕು. ಇದರಿಂದ ಹೆಚ್ಚಿನ ಬೀಜಗಳು ಲಭ್ಯವಾಗುತ್ತವೆ’ ಎಂದರು.

ತೋವಿವಿ ವಿಸ್ತರಣಾ ನಿರ್ದೇಶಕ ವೆಂಕಟೇಶಲು, ಸಂಶೋಧನಾ ನಿರ್ದೇಶಕ ಫಕ್ರುದ್ದೀನ್, ತೋಟಗಾರಿಕಾ ಮಹಾವಿದ್ಯಾಲಯದ ಶಾಂತಪ್ಪ ತಿರುಕಣ್ಣವರ್, ವಿಶೇಷ ಅಧಿಕಾರಿ ರವೀಂದ್ರ ಜಾವಡಗಿ ಸಹಪ್ರಾಧ್ಯಾಪಕರಾದ ಪಲ್ಲವಿ ಎಚ್ ಎಂ., ಸಹಾಯಕ ಪ್ರಾಧ್ಯಾಪಕ ವಾಸಿಂ ಎಂ.ಎಂ, ರಮೇಶ್ ಇದ್ದರು.

ಸಾವಯವ ಕೃಷಿ ಮಾಡುವಂತೆ ಸಲಹೆ ಬೀಜಗಳ ಕೊರತೆ ನೀಗಿಸಿ ಗುಣಮಟ್ಟದ ಬೀಜ ಬಳಸಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.