
ಬಾಗಲಕೋಟೆ: ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಕಿಲ್ಲಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ನಡುವೆ ಕೆಲ ಹಿಂದೂ ಮುಖಂಡರಿಗೆ ಪ್ರತಿಭಟನೆ ಕೈಗೊಂಡಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್ ಜಾರಿಗೊಳಿಸಲಾಗಿದೆ.
ವಿವಿಧೆಡೆ ಮಂಗಳವಾರ ರಕ್ಷಣಾ ಪಡೆಗಳವರು ಪಥ ಸಂಚಲನ ನಡೆಸಿದರು. ಪಂಕಾ ಮಸೀದಿ ಬಳಿಯ ಬಂದೋಬಸ್ತ್ ಮುಂದುವರೆಸಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ಎಲ್ಲ ರಸ್ತೆಗಳನ್ನು ಮುಕ್ತಗೊಳಿಸಲಾಗಿತ್ತು.
ಫೆ.28ರವರೆಗೆ ಬಾಗಲಕೋಟೆಯಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಶಾಂತಿ ಕಾಪಾಡುವ ದೃಷ್ಟಿಯಿಂದ, ಹೋಳಿ, ಯುಗಾದಿ, ರಂಜಾನ್ ಹಬ್ಬಗಳು ಬರುವುದರಿಂದ ಯಾವುದೇ ಪ್ರತಿಭಟನೆ ಮಾಡದಂತೆ ಮನವಿ ಮಾಡಲಾಗಿದೆ.
ನಿಷೇಧಾಜ್ಞೆ ಮೀರಿ ಯಾವುದೇ ಸಂಘಟನೆಗಳು ಬಂದ್ ಅಥವಾ ಪ್ರತಿಭಟನೆ ಕೈಗೊಂಡಲ್ಲಿ, ನಗರದಲ್ಲಿ ಅಶಾಂತಿ ಮೂಡಿಸಿದಲ್ಲಿ ಅದಕ್ಕೆ ಸಂಘಟಕರನ್ನೇ ನೇರವಾಗಿ ಹೊಣೆಗಾರರನ್ನಾಗಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರಿಗೆ ನೀಡಿದ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
16 ಪ್ರಕರಣ ದಾಖಲು: ಯಾವುದೇ ಸಮಾಜ ವಿರೋಧಿ ವ್ಯಕ್ತಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ವಿಷಯ ಪೋಸ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ 16 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ವಿಷಯಗಳನ್ನು ಹಂಚುವವರು ತಕ್ಷಣವೇ ಇಂತಹ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.