
ಬಾಗಲಕೋಟೆ: ತೆರಿಗೆ ಸಂಗ್ರಹ ಅಭಿಯಾನದ ಅಂಗವಾಗಿ ಸೋಮವಾರ ಒಂದೇ ದಿನ ಬಾಗಲಕೋಟೆ ಜಿಲ್ಲೆಯಲ್ಲಿ ₹3 ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಬಾಗಲಕೋಟೆ ತಾಲ್ಲೂಕಿನ ಕಲಾದಗಿ, ಖಜ್ಜಿಡೋಣಿ, ದೇವನಾಳ, ತುಳಸಿಗೇರಿ ಹಾಗೂ ಗದ್ದನಕೇರಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು, ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಿದ್ದು, ₹31.11 ಕೋಟಿ ತೆರಿಗೆ ಸಂಗ್ರಹವಾಗಬೇಕಿದೆ. ಈಗಾಗಲೇ ಅಂದಾಜು ₹25 ಕೋಟಿಯಷ್ಟು ಸಂಗ್ರಹವಾಗಿದೆ ಎಂದರು.
ತೆರಿಗೆ ಸಂಗ್ರಹ ಪ್ರಗತಿ, ಬಾಕಿ ತೆರಿಗೆ ಪಟ್ಟಿ, ದಿನನಿತ್ಯದ ವಸೂಲಾತಿ ದಾಖಲೆಗಳು ಹಾಗೂ ಇ-ಗ್ರಾಮ ಸ್ವರಾಜ್ ಪೋರ್ಟಲ್‍ನಲ್ಲಿ ದಾಖಲಾದ ಮಾಹಿತಿ ಪರಿಶೀಲಿಸಿದರು. ತೆರಿಗೆ ವಸೂಲಾತಿ ಗುರಿ ನಿಗದಿ ಮಾಡಿ ಪ್ರತಿ ದಿನ, ವಾರ ಪ್ರಗತಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಅವರು, ಗ್ರಾಮದ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಒಳಚರಂಡಿ ಹಾಗೂ ಇತರೆ ಮೂಲಸೌಲಭ್ಯಗಳ ನಿರ್ವಹಣೆಗಾಗಿ ತೆರಿಗೆ ಆದಾಯವೇ ಪ್ರಮುಖ ಆಧಾರವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂದರು.
ಅಭಿಯಾನದ ಅಂಗವಾಗಿ ಮನೆಮನೆಗೆ ಭೇಟಿ ನೀಡಿ ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ಶುಲ್ಕ ಹಾಗೂ ಇತರೆ ಕರಗಳನ್ನು ಪಾವತಿಸುವಂತೆ ಮನವಿ ಮಾಡಲಾಯಿತು. ದೀರ್ಘಕಾಲ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ನಿಯಮಾನುಸಾರ ನೋಟಿಸ್ ಜಾರಿಗೊಳಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಗ್ರಾಮ ಪಂಚಾಯಿತಿ ಸಿಬ್ಬಂದಿ ದಾಖಲೆ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಆದಾಯ–ಖರ್ಚಿನ ಲೆಕ್ಕಪತ್ರ ನವೀಕರಿಸುವುದು ಹಾಗೂ ಆನ್‍ಲೈನ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸುವಂತೆ ಮಾರ್ಗದರ್ಶನ ನೀಡಿದರು. ಮುಂದಿನ 15 ದಿನಗಳೊಳಗೆ ತೆರಿಗೆ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದದರು. ಬಾಗಲಕೋಟೆ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಉಪಸ್ಥಿತರಿದ್ದರು.
ತೆರಿಗೆ ಬಾಕಿ ಉಳಿಸಿದರೆ ಕ್ರಮಕೈಗೊಳ್ಳಿ ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹಿಸಿ ಗ್ರಾಮಸ್ಥರೊಂದಿಗೆ ಸಂವಾದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.