
ಬಾದಾಮಿ: ಬನಶಂಕರಿದೇವಿ ಜಾತ್ರೆಗೆ ಯಾತ್ರಿಕರು ಆಗಮಿಸುತ್ತಿದ್ದಂತೆ ಬಾದಾಮಿ ರಸ್ತೆಯ ಎಡ-ಬಲಕ್ಕೆ ವೈವಿಧ್ಯಮಯ ಕಲಾತ್ಮಕ ಬಾಗಿಲು ಚೌಕಟ್ಟುಗಳು ಸ್ವಾಗತಿಸುತ್ತಿವೆ.
ಹೊಳೆ ಆಲೂರಿನಲ್ಲಿ ಬಾಗಿಲು ಚೌಕಟ್ಟುಗಳನ್ನು ಮೊದಲು ಬಡಿಗೇರ ಜನಾಂಗದವರು ರೂಪಿಸುತ್ತಿದ್ದರು. ಈಗ ಎಲ್ಲ ಸಮುದಾಯದ ಜನರು ಬಾಗಿಲು ಚೌಕಟ್ಟುಗಳನ್ನು ನಿರ್ಮಿಸುವ ಕಲೆ ರೂಢಿಸಿಕೊಂಡಿದ್ದಾರೆ.
ವಿಶೇಷವಾಗಿ ಸಾಗವಾನಿ, ಮೈಸೂರು ಸಾಗವಾನಿ ಮತ್ತು ಬೇವಿನ ಕಟ್ಟಿಗೆಯಲ್ಲಿ ಆರರಿಂದ ಎಂಟು ಅಡಿ ಎತ್ತರ, ಮೂರುವರೆ ಅಡಿ ಅಗಲದ ಬಾಗಿಲು ಚೌಕಟ್ಟುಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಸಿದ್ಧವಾಗಿವೆ.
ಸಾಗವಾನಿ ಬಾಗಿಲು ₹ 30 ಸಾವಿರದಿಂದ ₹40 ಸಾವಿರ, ಮೈಸೂರು ಸಾಗವಾನಿ ₹14ಸಾವಿರದಿಂದ ₹30 ಸಾವಿರ ಮತ್ತು ಬೇವಿನ ಬಾಗಿಲು ₹1500 ದಿಂದ 5 ಸಾವಿರದವರೆಗೆ ಮಾರಾಟವಾಗುತ್ತಿವೆ.
ಬಾಗಿಲು ಚೌಕಟ್ಟಿನಲ್ಲಿ ಆಯಾ ಧರ್ಮದ ದೇವರುಗಳು, ಶರಣರು ,ದಾಸರು, ಸಂತರು, ಪ್ರಾಣಿ-ಪಕ್ಷಿಗಳು, ಪ್ರಕೃತಿ ಸೌಂದರ್ಯ, ಗಿಡ, ಮರ ಬಳ್ಳಿಗಳನ್ನು ಕಾಷ್ಟದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಯಲ್ಲಿ ಕಲಾವಿದರು ಸುಂದರವಾಗಿ ಅರಳಿಸಿದ್ದಾರೆ.
‘ಮೊದಲು ಗ್ರಾಮೀಣ ಪ್ರದೇಶದ ಶ್ರೀಮಂತರು ಮತ್ತು ಗೌಡರು ದೊಡ್ಡ ದೊಡ್ಡ ಬಾಗಿಲುಗಳನ್ನು ಕೊಂಡೊಯ್ಯುತ್ತಿದ್ದರು. ಈಗ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆ ಬಳಸುವುದರಿಂದ ನಗರ ಪ್ರದೇಶದ ಜನರೂ ಬಾಗಿಲು ಚೌಕಟ್ಟುಗಳನ್ನು ಖರೀದಿಸುತ್ತಿದ್ದಾರೆ’ ಎಂದು ಕಲಾವಿದ ಶಹಾಬುದ್ದೀನ (ಯಾಶೀನ) ಕೊತಬಾಳ ಪ್ರತಿಕ್ರಿಯಿಸಿದರು.
‘ಒಂದೊಂದು ಅಂಗಡಿಯಲ್ಲಿ 40 ರಿಂದ 60 ಬಾಗಿಲುಗಳನ್ನು ಮಾರಾಟಕ್ಕೆ ತಂದಿರುತ್ತಾರೆ. ಜಾತ್ರೆಯಲ್ಲಿ ಪ್ರತಿಯೊಂದು ಅಂಗಡಿಯಲ್ಲಿ 40 ರಿಂದ 50 ಬಾಗಿಲುಗಳ ಮಾರಾಟವಾಗುತ್ತವೆ ಎನ್ನುತ್ತಾರೆ’ ಕಲಾವಿದರು.
‘ಜಾತ್ರೆಗೆ ಬಂದಾಗ ಹೊಸ ಮನೆಗೆ ಮುಂಬಾಗಿಲನ್ನು ನೋಡಿಕೊಂಡು ಹೋಗುತ್ತೇವೆ, ಜಾತ್ರೆಯ ಗದ್ದಲ ಕಡಿಮೆಯಾದ ನಂತರ ತೆಗೆದುಕೊಂಡು ಹೋಗುತ್ತೇವೆ’ ಎಂದು ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಶಂಕರಗೌಡ ತಿಳಿಸಿದರು.
ಅಂದಪ್ಪ ಕೊರಗನ್ನವರ, ಎಚ್ಚರಪ್ಪ ಸೋಮಾಪೂರ, ಸುಲೇಮಾನ ಕೊತಬಾಳ, ವಿರೂಪಾಕ್ಷ ಮಚ್ಚೆನ್ನವರ, ಹನುಮಂತ ಸಂಗಟಿ, ಬಾಷೆಸಾಬ್ ಕೊತಬಾಳ, ಮಲ್ಲಪ್ಪ ಹಡಪದ ಮೊದಲಾದ ನೂರಾರು ಕಲಾವಿದರು ಇಡೀ ವರ್ಷ ಹೊಳೆ ಆಲೂರಿನಲ್ಲಿ ಬಾಗಿಲು ಚೌಕಟ್ಟುಗಳನ್ನು ತಯಾರಿಸುತ್ತಾರೆ.
ಜಾತಿ ಧರ್ಮಗಳ ಕಟ್ಟಳೆಗಳನ್ನು ಮೀರಿದ ಬಾಗಿಲು ಚೌಕಟ್ಟನ್ನು ವೈವಿಧ್ಯಮಯ ಕಲೆಯಿಂದ ಕಲಾವಿದರು ಆಕರ್ಷವಾಗಿ ತಯಾರಿಸಿದ್ದಾರೆದಾಜೀಬಾ ಜಗದಾಳೆ ಕಲಾವಿದ ಸಾಹಿತಿ ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.