ADVERTISEMENT

ವೃತ್ತಿ ರಂಗಭೂಮಿ ನಾಟಕಗಳಿಗೆ ಜನಸಾಗರ

ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:47 IST
Last Updated 15 ಜನವರಿ 2026, 3:47 IST
ಬಾದಾಮಿ ಬನಶಂಕರಿದೇವಿ ಜಾತ್ರೆಯ ನಾಟಕ ಪ್ರದರ್ಶನದಲ್ಲಿ ನಾಟಕವೊಂದರ ದೃಶ್ಯ
ಬಾದಾಮಿ ಬನಶಂಕರಿದೇವಿ ಜಾತ್ರೆಯ ನಾಟಕ ಪ್ರದರ್ಶನದಲ್ಲಿ ನಾಟಕವೊಂದರ ದೃಶ್ಯ   

ಬಾದಾಮಿ: ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಪ್ರೇಕ್ಷಕರ ಮನರಂಜನೆಗೆ ನಾಟಕೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಎಲ್ಲ ನಾಟಕ ಮಂದಿರದಲ್ಲಿ ಪ್ರೇಕ್ಷಕರು ಖುಷಿಯಿಂದ ನಾಟಕಗಳನ್ನು ವೀಕ್ಷಿಸುತ್ತಿದ್ದಾರೆ.

ಬನಶಂಕರಿಯಲ್ಲಿ 15 ದಿನಗಳ ಮುಂಚಿನಿಂದಲೇ ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ರಂಗವೇದಿಕೆ ಮತ್ತು ಟೆಂಟ್ ನಿರ್ಮಿಸುವಲ್ಲಿ, ಬ್ಯಾನರ್ ಮತ್ತು ಫ್ಲೆಕ್ಸ್ ಕಟ್ಟುವಿಕೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡಿದ್ದು, ವೇದಿಕೆಯನ್ನು ಆಕರ್ಷಕವಾಗಿ ಸಜ್ಜುಗೊಳಿಸಿದ್ದಾರೆ.

ಎರಡು ಮೂರು ದಶಕಗಳಿಂದ ಬಹುತೇಕ ನಾಟಕ ಕಂಪನಿ ಮಾಲೀಕರು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಾಟಕಗಿಗೆ ಹೊಸ ಹೊಸ ಶೀರ್ಷಿಕೆ ಇಟ್ಟು ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. 10ಕ್ಕೂ ವೃತ್ತಿ ರಂಗಭೂಮಿ ಕಂಪನಿಗಳು ಜಾತ್ರೆಗೆ ಬಂದಿದ್ದು ಗಿಚ್ಚ ಗಿಲಿಗಿಲಿ ಗಾಯತ್ರಿ, ಗಂಗಿ ನೀ ಜಗ್ಗಬ್ಯಾಡ ಲುಂಗಿ, ಸೋಗಲಾಡಿ ಸುಂದ್ರಿ, ನಿಂಗಿ ಗತ್ತು ಸಂಗ್ಯಾ ಗೊತ್ತು, ಹುಬ್ಬ ಹಾರಸ್ಯಾಳ ಜಾತ್ರ್ಯಾಗ ಧೂಳ ಎಬ್ಬಿಸ್ಯಾಳ, ರಚ್ಚು ಹಿಡದೈತಿ ನಿನ್ನ ಹುಚ್ಚು, ಜವಾರಿ ಹೆಣ್ಣು ಹೊಡಿಬ್ಯಾಡ ಕಣ್ಣು, ಪಕ್ಕದಮನಿ ಚಂದ್ರಿ ನೋಡಾಕ ನೀ ಸುಂದ್ರಿ ಮತ್ತು ಮುತ್ತಿನಂಥ ಅತ್ತಿಗೆ ನಾಟಕಗಳನ್ನು ಪ್ರದರ್ಶಿಸುತ್ತಿವೆ.

ADVERTISEMENT

‘ಐದು ದಶಕಗಳ ಹಿಂದೆ ಜಾತ್ರೆಯಲ್ಲಿ ರಾಜಕುಮಾರ, ವಿಷ್ಣುವರ್ಧನ ಅಭಿನಯಿಸಿದ ಹೊಸ ಹೊಸ ಚಲನಚಿತ್ರಗಳು ಬಿಡುಗಡೆಯಾಗುತ್ತಿದ್ದವು. ನಾಟಕ ಕಂಪನಿಗಳು ಒಂದೆರಡು ಬರುತ್ತಿದ್ದವು. ಐತಿಹಾಸಿಕ, ಪೌರಾಣಿಕ ಮತ್ತು ಭಕ್ತಿ ಪ್ರಧಾನ ನಾಟಕಗಳ ಪ್ರದರ್ಶನ ನಡೆಯುತ್ತಿದ್ದವು. ಆದರೆ ಈಗ ಚಲನಚಿತ್ರಗಳು ಬರುತ್ತಿಲ್ಲ. ಹಿಂದಿನಂಥ ನಾಟಕಗಳೂ ಇಲ್ಲ’ ಎಂದು ಬಿಜಕಲ್ ಗ್ರಾಮದ ವೃದ್ಧ ಬಸವಲಿಂಗಪ್ಪ ಅಭಿಪ್ರಾಯಪಟ್ಟರು.

ನಿತ್ಯ ಮಧ್ಯಾಹ್ನ ಮೂರು ಗಂಟೆಯಿಂದ ಆರಂಭವಾಗುವ ನಾಟಕಗಳು ರಾತ್ರಿ ಮೂರು ಗಂಟೆಯ ವರೆಗೂ ನಾಲ್ಕು ಪ್ರಯೋಗಗಳಲ್ಲಿ ಪ್ರದರ್ಶನ ನಡೆಸುತ್ತಿವೆ.

ರಂಗಭೂಮಿ ಹಿರಿಯ ಕಲಾವಿದರಾದ ಎಳಿವಾಳ ಸಿದ್ದಯ್ಯ, ಅದ್ರಶಪ್ಪ, ಏಣಗಿ ಬಾಳಪ್ಪ, ರಾಜಕುಮಾರ, ಬಾಲಕೃಷ್ಣ, ನರಸಿಂಹರಾಜ್, ರಾಜೇಶ, ಗಂಗಾಧರ, ಸುದರ್ಶನ, ವಜ್ರಮುನಿ, ಆದವಾನಿ ಲಕ್ಷ್ಮಿದೇವಿ, ಬಿ.ವಿ. ರಾಧಾ, ಎಲ್.ವಿ. ಶಾರದಾ, ಬಿ. ಸರೋಜಾದೇವಿ, ಫಂಡರಿಬಾಯಿ, ಕಲ್ಪನಾ, ಉಮಾಶ್ರೀ, ಭವ್ಯ ಹೀಗೆ ಅನೇಕ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು ನಾಟಕಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದಿದ್ದಾರೆ.

ಕಾಮಿಡಿ ಕಿಲಾಡಿ ಕಲಾವಿದರ ಮೂಲಕ ಹಾಸ್ಯ ನಾಟಕಗಳ 45ನೇ ಪ್ರಯೋಗ ಜಾತ್ರೆಯಲ್ಲಿ ಭರದಿಂದ ನಡೆಯುತ್ತಿವೆ.

ವೃತ್ತಿ ರಂಗಭೂಮಿ ಕಲಾವಿದರು ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶಿಸಿದರು

ಕಲಾವಿದರಿಂದ ಹಾಸ್ಯ ನಾಟಕಗಳು ಐತಿಹಾಸಿಕ, ಪೌರಾಣಿಕ, ಭಕ್ತಿ ನಾಟಕಗಳ ಕೊರತೆ ಪ್ರೇಕ್ಷಕರನ್ನು ಆಕರ್ಷಿಸಲು ಹೊಸ ಹೊಸ ಶೀರ್ಷಿಕೆ

‘ಜಾತ್ರೆಯಿಂದಾಗಿ ಕಲಾವಿದರಿಗೆ ಅನ್ನ’

‘ಇಡೀ ರಾಜ್ಯದಲ್ಲಿಯೇ ಉತ್ತರ ಕರ್ನಾಟಕದ ಬನಶಂಕರಿದೇವಿ ಜಾತ್ರೆಯಲ್ಲಿ ಪ್ರೇಕ್ಷಕರು ನಾಟಕಗಳನ್ನು ವೀಕ್ಷಿಸಿ ನಾಟಕ ಕಂಪನಿಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸುವರು. ಬನಶಂಕರಿದೇವಿ ಆಶೀರ್ವಾದದಿಂದ ನಮ್ಮ ಕಲಾವಿದರಿಗೆ ಅನ್ನ ದೊರೆಯುವಂತಾಗಿದೆ’ ಎಂದು ನಾಟಕ ರಚನೆಕಾರ ನಿರ್ದೆಶಕ ನಟ ಜೇವರ್ಗಿ ರಾಜಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.