ADVERTISEMENT

ಬೀಳಗಿ | ‘ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ದೇಸಿ ಕ್ರೀಡೆ’

ಬೀರೇಶ್ವರ ಜಾತ್ರೆ: ಗಮನ ಸೆಳೆದ ಸಂಗ್ರಾಣಿ ಕಲ್ಲು ಎತ್ತುವ, ತೆಕ್ಕೆ ಚೀಲ ಎತ್ತುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:26 IST
Last Updated 21 ಅಕ್ಟೋಬರ್ 2025, 2:26 IST
ಬೀಳಗಿ ಬೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಂಗ್ರಾಣಿ ಕಲ್ಲು ಎತ್ತುವ, ತೆಕ್ಕೆ ಚೀಲ ಎತ್ತುವ ಸ್ಪರ್ಧೆಗಳನ್ನು ಗಣ್ಯರು ಉದ್ಘಾಟಿಸಿದರು
ಬೀಳಗಿ ಬೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಂಗ್ರಾಣಿ ಕಲ್ಲು ಎತ್ತುವ, ತೆಕ್ಕೆ ಚೀಲ ಎತ್ತುವ ಸ್ಪರ್ಧೆಗಳನ್ನು ಗಣ್ಯರು ಉದ್ಘಾಟಿಸಿದರು   

ಬೀಳಗಿ: ‘ವಿಜ್ಞಾನ, ತಂತ್ರಜ್ಞಾನಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗವು ಗ್ರಾಮೀಣ ಕ್ರೀಡೆ, ಸಂಗೀತ, ಕಲೆ, ಸಂಸ್ಕೃತಿಗಳನ್ನು ಬಿಂಬಿಸುವ ಸಾಂಪ್ರದಾಯಿಕ ದೇಸಿ ಕ್ರೀಡೆಗಳನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿ’ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಎನ್. ಪಾಟೀಲ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಗುರು ಬೀರೇಶ್ವರ ಜಾತ್ರಾ ಮಹೋತ್ಸವದ ಕಮಿಟಿಯಿಂದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಚೀನ ಕಾಲದಿಂದ ಜನಪದ ಸಂಸ್ಕೃತಿಯಿಂದಲೇ ಹುಟ್ಟಿಕೊಂಡು ಬಂದಿರುವ ಸಾಂಪ್ರದಾಯಿಕ ದೇಸಿ ಆಟಗಳು ಇಂದು ಮರೆಯಾಗುತ್ತಿದ್ದು, ದೇಸಿ ಕ್ರೀಡೆಗಳು ಸರಳವಾಗಿದ್ದು, ಎಲ್ಲ ವರ್ಗದವರೂ ಆಡಬಹುದಾದ ಆಟಗಳಾಗಿವೆ. ಅವುಗಳಿಂದ ಬುದ್ಧಿ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಯುವಕರು ಇಂತಹ ದೇಸಿ ಆಟಗಳನ್ನು ಆಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಬೀಳಗಿ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮಲ್ಲಪ್ಪ ಶಂಭೋಜಿ ಮಾತನಾಡಿ, ‘ಜಾತ್ರೆಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಗಳಾಗಿವೆ. ಸಾಂಸ್ಕೃತಿಕ ಲೋಕವನ್ನು ಉಳಿಸಿ ಬೆಳೆಸುವಲ್ಲಿ ಜಾತ್ರೆಗಳ ಪಾತ್ರ ಪ್ರಮುಖವಾಗಿದೆ’ ಎಂದರು.

ಸಂಗಪ್ಪ ಕಂದಗಲ್ಲ, ಶಿವಪ್ಪ ಗಾಳಿ, ಭರಮಪ್ಪ ಗುಳಬಾಳ, ಪರಶುರಾಮ ಮಮದಾಪೂರ, ಪರಶುರಾಮ ಕುರಿ, ಬೊಜಪ್ಪ ದೇವೂರ, ಯಮನಪ್ಪ ಬಾಡಗಿ, ಮಹೇಶ ಯಡಹಳ್ಳಿ ಇದ್ದರು.

ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ನಡೆದ ಭಾರ ಎತ್ತುವ, ತೆಕ್ಕೆ ಚೀಲ ಎತ್ತುವ ಸ್ಪರ್ಧೆಯಲ್ಲಿ ಗ್ರಾಮೀಣ ಪರಿಸರದ ಹಳ್ಳಿ ಹೈದರು, ಭಾರವಾದ ವಸ್ತುಗಳನ್ನು ಸುಲಭವಾಗಿ ಎತ್ತುವ ಮೂಲಕ ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು. ಸಂಗ್ರಾಣಿ ಕಲ್ಲು, ಭಾರವಾದ ಚೀಲವನ್ನು ಹೂವನ್ನು ಎತ್ತಿಕೊಂಡಷ್ಟೇ ಸರಾಗವಾಗಿ ಮೇಲೆತ್ತಿ ನೆರೆದಿದ್ದ ಜನಸ್ತೋಮದಿಂದ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡರು.

ವಿಜೇತರು: ತೆಕ್ಕೆ ಬಡೆದು ಭಾರ ಎತ್ತುವ ಸ್ಪರ್ಧೆ: ಲಗಮಣ್ಣ ಜಾಲವಾದಿ ಪ್ರಥಮ, ಚಂದ್ರಶೇಖರ ಹಳ್ಳೂರ ದ್ವಿತೀಯ, ಹಣಮಂತ ಮಣ್ಣೂರ ತೃತೀಯ, ಬೀರಪ್ಪ ಬಿಸನಾಳ ಚತುರ್ಥ ಸ್ಥಾನ ಪಡೆದರು.

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ: ಅಬ್ದುಲಖಾನ ಮುಜಾವಾರ ಪ್ರಥಮ, ಸಂಗಪ್ಪ ಕೊಂತಿಕಲ್ಲ ದ್ವಿತೀಯ, ಮಲ್ಲಿಕಾರ್ಜುನ ಮನಗೂಳಿ ತೃತೀಯ, ರಾಜು ಮಾಲಗಿ ಚತುರ್ಥ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.