ಮಹಾಲಿಂಗಪುರ: ಪಟ್ಟಣದ ಕೆಂಗೇರಿಮಡ್ಡಿಯ ಲಕ್ಷ್ಮೀನಗರದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಮಂಗಳವಾರ ಬೀರಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಕರಿಸಿದ್ಧೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಮಹಾಲಿಂಗೇಶ್ವರ ದೇವಸ್ಥಾನ, ನಡುಚೌಕಿ, ಜವಳಿ ಬಜಾರ್, ಗಾಂಧಿ ವೃತ್ತ, ಚನ್ನಮ್ಮ ವೃತ್ತ, ಸಾಯಿ ಮಂದಿರ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಕೆಂಗೇರಿಮಡ್ಡಿಯ ನೂತನ ಬೀರಸಿದ್ಧೇಶ್ವರ ದೇವಸ್ಥಾನ ತಲುಪಿತು.
ವಿವಿಧ ವಾದ್ಯ ವೃಂದ, ಕುದುರೆಗಳು ಮೆರವಣಿಗೆಗೆ ಕಳೆಕಟ್ಟಿದವು. ಆ. 28 ರಂದು ಬೆಳಿಗ್ಗೆ 10ಕ್ಕೆ ಬೀರಸಿದ್ಧೇಶ್ವರ ದೇವಸ್ಥಾನದ ಉದ್ಘಾಟನೆ ಜತೆಗೆ ಈ ಮೂರ್ತಿಯ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.
ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸಿದ್ದಯೋಗಿ ಅಮರೇಶ್ವರ ಸ್ವಾಮೀಜಿ, ಲಕ್ಕಪ್ಪ ಮಹಾರಾಜರು ಸಾನ್ನಿಧ್ಯ ವಹಿಸುವರು. ಮಹಾಲಿಂಗಪ್ಪ ಜಕ್ಕನ್ನವರ ಅಧ್ಯಕ್ಷತೆ ವಹಿಸುವರು. ನಿರುಪಾಧೀಶ್ವರ ಸ್ವಾಮೀಜಿ ಪ್ರಾಣ ಪ್ರತಿಷ್ಠಾಪನೆ ಮಾಡುವರು. ಚಿನ್ಮಯಾನಂದ ಸ್ವಾಮೀಜಿ ಉದ್ಘಾಟಿಸುವರು. ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಸಿದ್ದು ಕೊಣ್ಣೂರ, ರಾಜೇಂದ್ರ ಪಾಟೀಲ, ಸತ್ಯಪ್ಪ ಹುದ್ದಾರ ಅತಿಥಿಗಳಾಗಿ ಆಗಮಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.