ADVERTISEMENT

ಬೀಳಗಿ| ತಾಲ್ಲೂಕು ಆಸ್ಪತ್ರೆಯಲ್ಲಿ ಲಿಫ್ಟ್ ಇಲ್ಲದೆ ವೃದ್ಧರಿಗೆ, ಮಕ್ಕಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:32 IST
Last Updated 20 ಸೆಪ್ಟೆಂಬರ್ 2025, 4:32 IST
ಬೀಳಗಿ ತಾಲ್ಲೂಕು ಆಡಳಿತ ಸೌಧ ಕಟ್ಟಡ
ಬೀಳಗಿ ತಾಲ್ಲೂಕು ಆಡಳಿತ ಸೌಧ ಕಟ್ಟಡ   

ಬೀಳಗಿ: ಪಟ್ಟಣದಲ್ಲಿರುವ ಆಡಳಿತಸೌಧ ಮತ್ತು ತಾಲ್ಲೂಕು ಆಸ್ಪತ್ರೆ ಕಟ್ಟಡಗಳು ಸುಸಜ್ಜಿತವಾಗಿದ್ದರೂ, ವೃದ್ಧರು, ಮಹಿಳೆಯರು, ಮಕ್ಕಳು ಸಂಬಂಧಿಸಿದ ಕಚೇರಿ ಮತ್ತು ಆಸ್ಪತ್ರೆಯಲ್ಲಿರುವ ಕೊಠಡಿ ತಲುಪಲು ಲಿಫ್ಟ್‌ ಸೌಲಭ್ಯ ಇಲ್ಲದಿರುವುದರಿಂದ ತೊಂದರೆ ಅನುಭವಿಸಬೇಕಿದೆ.

ಮಿನಿ ವಿಧಾನಸೌಧ ಮತ್ತು ತಾಲ್ಲೂಕು ಆಸ್ಪತ್ರೆ ನೆಲಮಹಡಿ ಸೇರಿ ಎರಡು ಅಂತಸ್ತಿನ ಕಟ್ಟಡಗಳನ್ನು ಹೊಂದಿವೆ. ಎರಡನೇ ಅಂತಸ್ತಿನ ಕಟ್ಟಡದಲ್ಲಿರುವ ಕೊಠಡಿಗಳನ್ನು ತಲುಪಲು ಜನಸಾಮಾನ್ಯರು ಮೆಟ್ಟಿಲೇರಿ ನಡೆದು ಹೋಗಬೇಕಾದ ಅನಿವಾರ್ಯತೆ ಇದೆ.

ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಬಹುತೇಕ ವೃದ್ಧರು, ಮಹಿಳೆಯರು, ಮಕ್ಕಳು ಇರುತ್ತಾರೆ. ಕೆಲ ಚಿಕಿತ್ಸೆಗೆ ಎರಡನೇ ಮಹಡಿಗೆ ಮೆಟ್ಟಿಲು ಹತ್ತಿ ಹೋಗಬೇಕು. ಇಂತಹ ಪರಿಸ್ಥಿತಿಯಲ್ಲಿ ಮೊದಲೇ ಸುಸ್ತಾಗಿರುವ ರೋಗಿಗಳು, ಮತ್ತಷ್ಟು ಸುಸ್ತಾಗುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು. 

ADVERTISEMENT

ಸಾರ್ವಜನಿಕರ ಉಪಯೋಗಕ್ಕೆ ನಿರ್ಮಾಣ ಮಾಡುವ ಕಟ್ಟಡಗಳಿಗೆ ಅಂದಾಜು ಪಟ್ಟಿ ತಯಾರು ಮಾಡುವ ಸಂದರ್ಭದಲ್ಲಿ, ಲಿಫ್ಟ್ ಅಳವಡಿಸಲು ಅವಕಾಶ ಕಲ್ಪಿಸಬೇಕು. ಆದರೆ ಈ ಕಟ್ಟಡಗಳಿಗೆ ಲಿಫ್ಟ್ ಅಳವಡಿಸದಿರುವುದರಿಂದ ವಯೋವೃದ್ಧರು, ಮಹಿಳೆಯರು ಸಂಕಷ್ಟಕ್ಕೀಡಾಗಿದ್ದಾರೆ.

‘ಮಿನಿ ವಿಧಾನಸೌಧ ಮತ್ತು ತಾಲ್ಲೂಕು ಆಸ್ಪತ್ರೆಗೆ ಕೂಡಲೇ ಲಿಫ್ಟ್ ಅಳವಡಿಸಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು’ ಎಂದು ವಯೋವೃದ್ಧರು, ಮಹಿಳೆಯರು ಒತ್ತಾಯಿಸಿದ್ದಾರೆ.

‘ನನಗೆ 75 ವರ್ಷ ವಯಸ್ಸಾಗಿದೆ. ರೇಷನ್‌ ಕಾರ್ಡ್‌ ಮಾಡಿಸಲು ತಹಶೀಲ್ದಾರ್ ಆಫೀಸ್‌ನ ಎರಡನೇ ಮಹಡಿಗೆ ಹೋಗಬೇಕು. ಮೆಟ್ಟಿಲು ಏರಲು ಸಾಧ್ಯವಾಗುತ್ತಿಲ್ಲ. ದಾಖಲೆಗಳನ್ನು ಪಡೆಯಲೂ ಆಗುತ್ತಿಲ್ಲ. ಲಿಫ್ಟ್ ಅಳವಡಿಸಬೇಕು’ ಎಂದು ಸ್ಥಳೀಯ ನಿವಾಸಿ ಕಲ್ಲಪ್ಪ ಮುಳವಾಡ ತಿಳಿಸಿದರು.

ಬೀಳಗಿಯ ಆಡಳಿತ ಸೌಧದಲ್ಲಿ ವೃದ್ಧೆಯೊಬ್ಬರನ್ನು ಮಹಿಳೆಯರು ಕರೆದುಕೊಂಡು ಹೋದರು
ವಯೋವೃದ್ಧರಿಗೆ ಮಹಿಳೆಯರಿಗೆ ರೋಗಿಗಳಿಗೆ ಮೇಲಂತಸ್ತಿಗೆ ಹೋಗಿ ಬರಲು ಕಷ್ಟವಾಗುತ್ತದೆ. ಲಿಫ್ಟ್‌ ಅವಶ್ಯಕತೆಯಿದೆ. ಬರುವ ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ವಿನೋದ ಹತ್ತಳ್ಳಿ ತಹಶೀಲ್ದಾರ್ ಬೀಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.