ADVERTISEMENT

ಬೇವೂರ: 'ಸಾಮೂಹಿಕ ವಿವಾಹ ನಿರ್ಗತಿಕರ ಲಗ್ನವಲ್ಲ'

ಬೇವೂರಿನಲ್ಲಿ ಸಾಮೂಹಿಕ ವಿವಾಹ: ಬಿಲ್ ಕೆರೂರ ಶ್ರೀಗಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:38 IST
Last Updated 16 ಡಿಸೆಂಬರ್ 2025, 2:38 IST
ಬೇವೂರಿನಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11 ಜೋಡಿ ನವ ಜೀವನಕ್ಕೆ ಕಾಲಿಟ್ಟವು
ಬೇವೂರಿನಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11 ಜೋಡಿ ನವ ಜೀವನಕ್ಕೆ ಕಾಲಿಟ್ಟವು   

ಬೇವೂರ (ರಾಂಪುರ): ‘ಸಾಮೂಹಿಕ ವಿವಾಹಗಳು ಬಡವರು ಹಾಗೂ ನಿರ್ಗತಿಕರ ಮದುವೆ ಎನ್ನುವ ತಾತ್ಸಾರ ಭಾವನೆ ಬೇಡ. ಇಲ್ಲಿ ಮದುವೆಯಾಗುವವರು ಪುಣ್ಯಶಾಲಿಗಳು’ ಎಂದು ಬಿಲ್ ಕೆರೂರ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸ್ಥಳೀಯ ಗ್ಯಾನೇಶ್ವರ ದೇವರ ಕಾರ್ತಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬಡವರ ಆರ್ಥಿಕ ಹೊರೆಯನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಸಂಘ-ಸಂಸ್ಥೆಗಳು ದಾನಿಗಳ ಸಹಾಯ, ಸಹಕಾರದಿಂದ ಸಾಮೂಹಿಕ ವಿವಾಹ ಮಾಡುತ್ತಾರೆ. ಹೀಗಾಗಿ ಇಲ್ಲಿ ವಿವಾಹ ಮಾಡಿಕೊಳ್ಳುವವರು ಅತ್ಯಂತ ಭಾಗ್ಯಶಾಲಿಗಳು’ ಎಂದರು.

ADVERTISEMENT

‘ನವದಂಪತಿಗಳು ಮಕ್ಕಳನ್ನು ಹೆತ್ತು ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ, ಸಂಸ್ಕಾರ ಕಲಿಸಿ ಸತ್ಪ್ರಜೆಗಳನ್ನಾಗಿ ಮಾಡಬೇಕು. ಅವರಲ್ಲಿ ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿ ಸದ್ಗುಣಿಗಳನ್ನಾಗಿ ಮಾಡಿ ದೇಶದ ಆಸ್ತಿಯನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಅತಿಥಿ ಸಿದ್ದಪ್ಪ ಶಿರೂರ ಮಾತನಾಡಿ, ‘ಸರ್ವಧರ್ಮ ಸಾಮೂಹಿಕ ವಿವಾಹ ಪುಣ್ಯದ ಕಾರ್ಯವಾಗಿದ್ದು, ಇಲ್ಲಿ ಮದುವೆಯಾಗುವವರು ಪುಣ್ಯವಂತರೇ’ ಎಂದು ಹೇಳಿದರು.

ಆಶೀರ್ವಚನ ನೀಡಿದ ಹರನಾಳದ ಸಂಗನಬಸವ ಸ್ವಾಮೀಜಿ, ‘ನೂತನ ವಧು– ವರರು ಸಮನ್ವಯತೆಯ ಜೀವನ ಸಾಗಿಸಿ ಆದರ್ಶ ದಂಪತಿಗಳಾಗಿ ಬಾಳಬೇಕು’ ಎಂದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಜಿ.ವೈ.ಹೆರಕಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಯನೇಗಲಿಯ ನಿರಂಜನ ಮಾತಾಜಿ ಉಪಸ್ಥಿತರಿದ್ದರು. ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು.  ಗ್ಯಾನಪ್ಪಜ್ಜನವರು ನೇತೃತ್ವ ವಹಿಸಿದ್ದರು.

ಆಲಮಟ್ಟಿ ರೇಂಜ್ ಫಾರೆಸ್ಟ್ ಅಧಿಕಾರಿ ಮಹೇಶ ಪಾಟೀಲ, ಶೇಖಣ್ಣ ಹೆರಕಲ್, ನಿಂಗಪ್ಪ ಮಾಗನೂರ, ಗ್ರಾಪಂ ಪಿಡಿಓ ಬಿ.ಬಿ.ಇಟಗಿ, ಈರಣ್ಣ ಪತ್ತಾರ, ಶರಣಪ್ಪ ಮಾಗನೂರ, ರತನಕುಮಾರ ವೈಜಾಪೂರ, ಗ್ಯಾನಪ್ಪ ಚಲವಾದಿ,ಮಲ್ಲಪ್ಪ ಹೆರಕಲ್, ಸಿದ್ದು ಕುರಿ, ಸಂಗಮೇಶ ಇಂಡಿ, ಮಡ್ಡೇಸಾಬ ಗುರಗುನ್ನಿ, ವಕೀಲ ಬಿ.ಬಿ.ತೆಗ್ಗಿನಮನಿ, ಎಂ.ಎಸ್.ವೈಜಾಪೂರ, ಎಂ.ಎಸ್.ಮೇಟಿ, ಬಸವರಾಜ ಮಸಬಿನಾಳ ಅತಿಥಿಗಳಾಗಿ ಪಾಲ್ಗೊಂಡಿದ್ದರು.

11 ಜೋಡಿಗಳ ವಿವಾಹ: ವಿವಾಹ ಕಾರ್ಯಕ್ರಮದಲ್ಲಿ 11 ಜೋಡಿ ವಧು- ವರರು ಸಪ್ತಪದಿ ತುಳಿದು ಹೊಸ ಜೀವನಕ್ಕೆ ಅಡಿಯಿಟ್ಟರು.

‘ಸಹಾಯ ಸಹಕಾರ ಅಗತ್ಯ’

ಬೇವೂರ ಆದರ್ಶ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಕೀಲ ಜಿ.ಜಿ.ಮಾಗನೂರ ಮಾತನಾಡಿ ‘ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿದ್ದು ಪೂಜ್ಯ ಗ್ಯಾನಪ್ಪಜ್ಜನವರು ಪ್ರತಿ ವರ್ಷ ನಡೆಸಿಕೊಡುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸರ್ವರ ಸಹಾಯ ಸಹಕಾರ ದೊರೆಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.