ADVERTISEMENT

ಮತದಾರ ಪಟ್ಟಿಯಲ್ಲಿ ಅಕ್ರಮ ಸೇರ್ಪಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಡುವೆ: ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:26 IST
Last Updated 1 ಜನವರಿ 2026, 7:26 IST
ಮತದಾರರ ಪಟ್ಟಿಯಲ್ಲಿ ಅಕ್ರಮ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಬುಧವಾರ ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರು, ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು
ಮತದಾರರ ಪಟ್ಟಿಯಲ್ಲಿ ಅಕ್ರಮ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಬುಧವಾರ ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರು, ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು   

ಬಾಗಲಕೋಟೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಆಡಳಿತ ಕಾಂಗ್ರೆಸ್ ಪಕ್ಷದ ಮುಖಂಡರು ಹುನಗುಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಡಳಿತ ಭವನದ ಎದುರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಹುನಗುಂದ ಹಾಗೂ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಹುನಗುಂದ ಕ್ಷೇತ್ರದ ಮುರಡಿ ಗ್ರಾಮದಲ್ಲಿ ಹೊರ ಜಿಲ್ಲೆಗಳ ಮತದಾರರನ್ನು ಅಕ್ರಮವಾಗಿ ಸೇರಿಸಲಾಗುತ್ತಿದೆ. ಜೊತೆಗೆ ಅಪ್ರಾಪ್ತರ ಹೆಸರು ಸಹ ಸೇರಿಸಿದ್ದಾರೆ. ಒಂದೇ ವಾರ್ಡ್‍ನಲ್ಲಿ ಒಬ್ಬ ಮತದಾರನ ಹೆಸರು ಸ್ವಲ್ಪ ಹೆಚ್ಚು, ಕಡಿಮೆ ಮಾಡಿ ಮೂರು ಕಡೆ ಸೇರಿಸಲಾಗಿದೆ. ಇದನ್ನು ಕಾಂಗ್ರೆಸ್ ಮುಖಂಡರು ಕೆಳ ಹಂತದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮಾಡಿಸುತ್ತಿದ್ದಾರೆ. ಇದರಲ್ಲಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ದೂರಿದರು.

‘ನಗರ ಪ್ರದೇಶದಲ್ಲಿ ಸಹ ನಗರಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಒಂದು ವಾರ್ಡಿನ 50ಕ್ಕೂ ಹೆಚ್ಚು ಮತದಾರರನ್ನು ಬೇರೆ ವಾರ್ಡ್‍ಗೆ ಸ್ಥಳಾಂತರ ಮಾಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಪೂರಕವಾಗಿ ಅಕ್ರಮ ಎಸಗುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ADVERTISEMENT

‘ಒಂದು ಕಡೆ ಕಾಂಗ್ರೆಸ್ ನಾಯಕರು ಮತ ಕಳವು ಎಂದು ದೇಶದಲ್ಲಿ ಓಡಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ನವರೇ ಮತ ಕಳವು ಮಾಡುತ್ತಿದ್ದಾರೆ. ನೆಹರೂ ಅವರಿಂದ ಸೋನಿಯಾಗಾಂಧಿವರೆಗೂ ಅಕ್ರಮ ಮಾಡಿಕೊಂಡೇ ಗೆದ್ದು ಬಂದಿದ್ದಾರೆ. ಈಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಹುನಗುಂದ ಕ್ಷೇತ್ರ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಳೀಯ ಸಂಸ್ಥೆಯಲ್ಲಿ ಸೋಲುವ ಭೀತಿಯಿಂದ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡುತ್ತಿದೆ’ ಎಂದು ದೂರಿದ ಅವರು, ‘ಈ ಬಗ್ಗೆ ರಾಜ್ಯ ಚುನಾವಣಾ ಅಧಿಕಾರಿಗೂ ಸಹ ದೂರು ಕೊಡುತ್ತೇವೆ. ಇಲ್ಲಿ ಬರಿ ಬಿಎಲ್‍ಒ ವಿರುದ್ಧ ಕ್ರಮ ತೆಗೆದುಕೊಳ್ಳದೇ ಹಿರಿಯ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ರಾಹುಲ್ ಗಾಂಧಿ ನಾಲಿಗೆ, ಮೆದುಳಿಗೆ ಲಿಂಕ್ ಇಲ್ಲವಾಗಿದೆ. ಹೀಗಾಗಿ ಮತ ಕಳವು ಎಂದು ತಿರುಗಾಡುತ್ತಿದ್ದಾರೆ. ಮಾಡಲು ಬೇರೆ ಕೆಲಸ ಇಲ್ಲ. ಸಂಸತ್ ಅಧಿವೇಶನ ನಡೆದಾಗ ವಿದೇಶಕ್ಕೆ ಹೋಗಿ, ಮುಗಿದ ಮೇಲೆ ವಾಪಸ್ ಬರುತ್ತಾರೆ. ಅವರಿಗೆ ಏನು ಮಾತನಾಡಬೇಕು ಎಂದು ಗೊತ್ತಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಓದುತ್ತಾರೆ. ಅದರ ಬಗ್ಗೆ ಮಾಹಿತಿಯೇ ಇರಲ್ಲ’ ಟೀಕಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಎಂ.ಎಸ್.ದಡ್ಡೇನವರ, ಡಾ.ಮಹಾಂತೇಶ ಕಡಪಟ್ಟಿ, ಅರವಿಂದ ಮಂಗಳೂರ, ರಾಜು ರೇವಣಕರ, ಬಸವರಾಜ ಹುನಗುಂದ, ಮಲ್ಲಯ್ಯ ಮೂಗನೂರಮಠ, ಶ್ರೀಧರ ನಾಗರಬೆಟ್ಟ, ಶಿವಾನಂದ ಸುರಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.