
ಮಹಾಲಿಂಗಪುರ: ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವ, ವ್ಯವಹಾರಿಕ ಜೀವನ ನಿರ್ವಹಣೆ ಮಹತ್ವ ತಿಳಿಸುವ ಉದ್ದೇಶದಿಂದ ಸಮೀಪದ ನಾಗರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಸಂತೆ ಗಮನ ಸೆಳೆಯಿತು.
ಓದು ಆಟ-ಪಾಠಕ್ಕೆ ಮೀಸಲಾಗಿದ್ದ ಶಾಲಾ ಆವರಣ ಸಂತೆಯ ರೀತಿ ಮಾರ್ಪಾಡಾಗಿತ್ತು. 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು ತಮ್ಮ ಮನೆ, ತೋಟದಿಂದ ತಂದ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ತಿಂಡಿ ತಿನಿಸುಗಳು ಸಂತೆಯಲ್ಲಿದ್ದವು. ಸಂತೆ ಸ್ಥಳದಲ್ಲೇ ಭಜ್ಜಿ ತಯಾರಿಸಿದ್ದು ವಿಶೇಷವಾಗಿತ್ತು. ಮೊದಲೇ ಹಳ್ಳಿ ಮಕ್ಕಳಾಗಿದ್ದರಿಂದ ಪೈಪೋಟಿಗೆ ಬಿದ್ದವರಂತೆ ಭರ್ಜರಿ ವ್ಯಾಪಾರ ಮಾಡಿದರು.
ಶಿಕ್ಷಕರು, ಪೋಷಕರೇ ಗ್ರಾಹಕರಾಗಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು.
ಮೋಘಸಿದ್ಧೇಶ್ವರ ದೇವಸ್ಥಾನದ ಅರ್ಚಕ ಸದಾಶಿವ ಒಡೆಯರ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ’ ಎಂದರು.
ಎಸ್‍ಡಿಎಂಸಿ ಅಧ್ಯಕ್ಷ ದುಂಡಪ್ಪ ಕೈಪಾಳಿ, ಮುಖ್ಯಶಿಕ್ಷಕ ವಿಠ್ಠಲ ರೋಡಕರ, ದುಂಡಪ್ಪ ಜೈನಾಪುರ, ಶ್ರೀಶೈಲಗೌಡ ಪಾಟೀಲ, ಸುಭಾಷ ಕತ್ತಿ, ಶಂಕರಗೌಡ ಪಾಟೀಲ, ಯಲ್ಲಪ್ಪ ಸೂರ್ಯವಂಶಿ, ಶ್ರೀನಿವಾಸ ಪಾಟೀಲ, ಸಿದ್ದಪ್ಪ ಗಿರೆವ್ವಗೋಳ, ಸಿದ್ದಪ್ಪ ರಡರಟ್ಟಿ, ಲೋಕಣ್ಣ ಕತ್ತಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.