ರಬಕವಿ ಬನಹಟ್ಟಿ ಸಮೀಪದ ಜಗದಾಳ ಗ್ರಾಮದ ರೈತರಾದ ಸತ್ಯಪ್ಪ ಹೊಸೂರ ಮತ್ತು ಶಿವಲಿಂಗ ಹೊಸೂರ ತಮ್ಮ ತೋಟದಲ್ಲಿ ಬೆಳೆದ ಬದನೆಕಾಯಿಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಜ್ಜು ಮಾಡಿದರು
ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ರೈತರಾದ ಸತ್ಯಪ್ಪ ಹೊಸೂರ ಮತ್ತು ಅವರ ಮಗ ಶಿವಲಿಂಗ ಹೊಸೂರ ತಮ್ಮ ತೋಟದ ಒಂದೂವರೆ ಎಕರೆ ಭೂಪ್ರದೇಶದಲ್ಲಿ ಬದನೆಕಾಯಿ ಬೆಳೆದು ಉತ್ತಮ ಲಾಭ ಮಾಡಿಕೊಂಡಿದ್ದಾರೆ.
’ಪಂಚಗಂಗಾ‘ ತಳಿಯ ಬದನೆಕಾಯಿ ಬೆಳೆಯುತ್ತಿರುವ ಇವರು ಒಂದೂವರೆ ಎಕರೆಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಅಂದಾಜು ₹2 ಲಕ್ಷದಷ್ಟು ಖರ್ಚು ಮಾಡಿ, 4,000 ಸಸಿಗಳನ್ನು ನಾಟಿ ಮಾಡಿದ್ದರು. ನಾಟಿ ಮಾಡಿದ ನಾಲವತ್ತೈದು ದಿನಗಳಲ್ಲಿ ಬದನೆಕಾಯಿ ಬರಲಾರಂಭಿಸಿದವು.
ಮಲ್ಚಿಂಗ್ ಪೇಪರ್ ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಮೇ ತಿಂಗಳ ಮೂರನೇ ವಾರದಲ್ಲಿ ಕಟಾವು ಮಾಡಲು ಆರಂಭಿಸಿದರು. ಈಗ ಪ್ರತಿದಿನ ಅಂದಾಜು 30ಕ್ಕೂ ಹೆಚ್ಚು ತುಂಬಿದ ಟ್ರೇಗಳನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.
’ಒಂದು ಟ್ರೇದಲ್ಲಿ ಅಂದಾಜು 14ರಿಂದ 15 ಕೆ.ಜಿ.ವರೆಗೆ ಬದನೆಕಾಯಿಗಳು ಇರುತ್ತವೆ. ಸ್ಥಳೀಯ ಮಾರುಕಟ್ಟೆ ಸೇರಿದಂತೆ ಜಮಖಂಡಿ, ಮುಧೋಳ ಹಾಗೂ ವಿಜಯಪುರದ ಮಾರುಕಟ್ಟೆಗೂ ಕಳುಹಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಪ್ರತಿ ಟ್ರೇಗೆ ₹500 ರಿಂದ ₹550ರ ವರೆಗೆ ಮಾರಾಟವಾಗುತ್ತವೆ. ವಾರದಲ್ಲಿ ಆರು ದಿನಗಳ ಕಾಲ ಕಟಾವು ಮಾಡುತ್ತೇವೆ. ಬೆಳೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ ಏಳೆಂಟು ತಿಂಗಳುಗಳ ಕಾಲ ಉತ್ತಮ ಇಳುವರಿ ಪಡೆದುಕೊಳ್ಳಬಹುದಾಗಿದೆ‘ ಎನ್ನುತ್ತಾರೆ ರೈತರಾದ ಸತ್ಯಪ್ಪ ಹೊಸೂರ ಮತ್ತು ಅವರ ಮಗ ಶಿವಲಿಂಗ ಹೊಸೂರ.
‘ಜಗದಾಳ ಗ್ರಾಮದ ಪ್ರವಿರಾಮ ಶ್ರೀನಾಥ ಅಗ್ರಿ ಮಾಲ್‌ನ ದೇವರಾಜ ರಾಠಿಯವರ ಮಾರ್ಗದರ್ಶನದಲ್ಲಿ ಬದನೆಕಾಯಿಗಳನ್ನು ಬೆಳೆಯಲಾಗಿದೆ. ಮುಂಬರುವ ನಾಲ್ಕೈದು ತಿಂಗಳುಗಳಲ್ಲಿ ಉತ್ತಮ ಲಾಭ ಪಡೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿನಾಲು ಹತ್ತಾರು ಜನ ಮಹಿಳಾ ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ’ ಎನ್ನುತ್ತಾರೆ ರೈತ ಶಿವಲಿಂಗ ಹೊಸೂರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.