ADVERTISEMENT

ಬಾಗಲಕೋಟೆ | ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:10 IST
Last Updated 5 ಫೆಬ್ರುವರಿ 2026, 6:10 IST
ಅನಧಿಕೃತ ಮಸೀದಿ ನಿರ್ಮಾಣ ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮುಖಂಡರು ಬುಧವಾರ ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು
ಅನಧಿಕೃತ ಮಸೀದಿ ನಿರ್ಮಾಣ ತಡೆಯಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮುಖಂಡರು ಬುಧವಾರ ಬಿಟಿಡಿಎ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು   

ಬಾಗಲಕೋಟೆ: ನವನಗರದ ವಿವಿಧ ಸೆಕ್ಟರ್‌ಗಳಲ್ಲಿ ಅನಧಿಕೃತವಾಗಿ ಮಸೀದಿ (ಪ್ರಾರ್ಥನಾ ಮಂದಿರ) ನಿರ್ಮಾಣ ಮಾಡಲಾಗುತ್ತಿದೆ. ಅವುಗಳ ನಿರ್ಮಾಣ ತಡೆಯಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ಬುಧವಾರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು.

ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಮಸೀದಿಗಳ ತೆರವಿಗೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ, ಬಿಟಿಡಿಎ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರದಲ್ಲೇ ಅನಧಿಕೃತ ಮಸೀದಿಗಳನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪರವಾನಗಿ ಇಲ್ಲದೇ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕುಮಾರಸ್ವಾಮಿ ಹಿರೇಮಠ, ಕಿರಣ ಪವಾಡಶೆಟ್ಟರ, ನಾಗೇಶ ಅಂಬಿಗೇರ, ರಾಜು ಶಿಂಧೆ, ಚಂದ್ರು ರಾಮವಾಡಗಿ, ಯಲ್ಲಪ್ಪ ದೊಡಮನಿ, ಸಾಬಣ್ಣ ಯತ್ನಟ್ಟಿ, ರವಿ ವಿಶ್ವಬ್ರಾಹ್ಮಣ, ಅಮರೇಶ ಆದಾಪುರ ಮತ್ತಿತರರು ಭಾಗವಹಿಸಿದ್ದರು.

ಎಚ್ಚೆತ್ತ ಬಿಟಿಡಿಎ:

ಪ್ರತಿಭಟನೆಯ ನಂತರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು, ಅನಧಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡಗಳ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ನೋಟಿಸ್‌ ನೋಡಿದೆ.

ಸೆಕ್ಟರ್‌ ನಂ.64 ಹಾಗೂ ನಂ.65ರಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ಜಾಗ ನೀಡಲಾಗಿದೆ. ತಾತಾಲಿಕ ಶೆಡ್‌ ನಿರ್ಮಿಸಿಕೊಳ್ಳಲು ಅನುಮತಿ ಕೋರಿತ್ತೀರಿ ಮುಖ್ಯ ಎಂಜಿನಿಯರ್ ಕಚೇರಿಗೆ ಅರ್ಜಿ ಸಲ್ಲಿಸಿರುತ್ತೀರಿ. ಅದನ್ನು ಸಂಬಂಧಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಕಳುಹಿಸಿರುತ್ತಾರೆ. ಅಲ್ಲಿಂದ ಪ್ರತಿಕ್ರಿಯೆ ಬರುವ ಮೊದಲೇ ಕಟ್ಟಡ ಕಾಮಗಾರಿ ಆರಂಭಿಸಿರುತ್ತೀರಿ. ಕೂಡಲೇ ನಿರ್ಮಾಣ ಕಾರ್ಯ ನಿಲ್ಲಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.