ರಾಂಪುರ: ‘ಮಹಿಳೆಯರಿಗೆ ಉಡಿ ತುಂಬುವುದು ಭಾರತೀಯ ಸಂಸ್ಕೃತಿಯ ಪ್ರತೀಕ’ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಹಾಯೋಗಿ ವೇಮನ ಅಧ್ಯಯನ ಪೀಠದ ಸಂಯೋಜಕ ಹೇಮರಡ್ಡಿ ನೀಲಗುಂದ ಹೇಳಿದರು.
ಶ್ರಾವಣ ಮಾಸದ ಮುಕ್ತಾಯ ಕಾರ್ಯಕ್ರಮದ ಅಂಗವಾಗಿ ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಸೋಮವಾರ ಮುಧೋಳದ ಅಖಿಲ ಕರ್ನಾಟಕ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ವ್ರತ ಪ್ರಚಾರ ಸಮಿತಿ, ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಮತ್ತು ಸ್ಥಳೀಯ ಮಹಿಳಾ ಮಂಡಳಗಳ ಸಹಯೋಗದಲ್ಲಿ ಜರುಗಿದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕುಟುಂಬ ನಿರ್ವಹಣೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಸಂಪ್ರದಾಯ’ ಎಂದರು.
ಕಲ್ಮಡ-ಲಕ್ಷಾನಟ್ಟಿಯ ಪೂರ್ಣಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಂಶೋಧಕ ಸಂಗಮೇಶ ಕಲ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿ ಗಾಯತ್ರಿ ನೀಲಗುಂದ ಹಾಗೂ ಪ್ರೊ.ಅನಿತಾ ಪಾಟೀಲ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ವ್ರತ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಪಿ.ಜೈನಾಪೂರ, ಸಮಿತಿಯ ಕಾರ್ಯದರ್ಶಿ ನಿಂಗನಗೌಡ ಪಾಟೀಲ, ಮುತ್ತು ಅರಕೇರಿ, ಡಿ.ಎಂ.ಬೆಣ್ಣೂರ, ಗಂಗಾ ಅಮಾತೆಪ್ಪನವರ, ಪಾಂಡುರಂಗ ಸನ್ನಪ್ಪನವರ ಇದ್ದರು.
ವಿವಿಧೆಡೆಯಿಂದ ಆಗಮಿಸಿದ್ದ 350 ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬಲಾಯಿತು. ವ್ರತಾಚರಣೆ ಪುಸ್ತಕ ದಾನಿಗಳನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.