ADVERTISEMENT

ಹೋಬಳಿಗೆ ಬಸ್ ಸೇವೆ ಇಂದಿನಿಂದ

ಪ್ರಯಾಣಿಕರಿಂದ ಸ್ಪಂದನೆ ಹೆಚ್ಚಳ; ಸಾರಿಗೆ ಸಂಸ್ಥೆ ಆದಾಯದಲ್ಲಿ ಚೇತರಿಕೆ

ವೆಂಕಟೇಶ ಜಿ.ಎಚ್.
Published 31 ಆಗಸ್ಟ್ 2020, 19:30 IST
Last Updated 31 ಆಗಸ್ಟ್ 2020, 19:30 IST

ಬಾಗಲಕೋಟೆ: ಪ್ರಯಾಣಿಕರಿಂದ ಉತ್ತಮ ಸ್ಪಂದನೆಗೆ ಉತ್ತೇಜನಗೊಂಡಿರುವ ವಾಯವ್ಯ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗ ಸೆ‍ಪ್ಟೆಂಬರ್ 1ರಿಂದ ಜಿಲ್ಲೆಯ ಎಲ್ಲ ಹೋಬಳಿಗಳಿಗೂ ಬಸ್ ಸೇವೆ ಪುನರಾರಂಭಿಸಲು ಮುಂದಾಗಿದೆ.

‘ಲಾಕ್‌ಡೌನ್ ಮುಗಿದ ನಂತರ ಬಾಗಲಕೋಟೆ ವಿಭಾಗದಿಂದ ಇಲ್ಲಿಯವರೆಗೆ 380 ಮಾರ್ಗಗಳಲ್ಲಿ ಬಸ್ ಸೇವೆ ಆರಂಭವಾಗಿದೆ. ನಿತ್ಯ ₹ 25 ಲಕ್ಷ ಆದಾಯ ಸಂಗ್ರಹವಾಗುತ್ತಿದೆ. ಮಂಗಳವಾರದಿಂದ ಇನ್ನೂ 30 ಮಾರ್ಗಗಳಲ್ಲಿ ಸಂಚಾರ ಆರಂಭಿಸಲಾಗುವುದು. ಆದಾಯ ಪ್ರಮಾಣ ₹ 29 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ’ ಎಂದು ವಾಯವ್ಯ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಪಂದನೆ ಹೆಚ್ಚಳ: ‘ಲಾಕ್‌ಡೌನ್‌ಗೆ ಮುನ್ನ ಬಾಗಲಕೋಟೆ ವಿಭಾಗದಲ್ಲಿ ನಿತ್ಯ ₹ 80 ಲಕ್ಷ ಆದಾಯ ಬರುತ್ತಿತ್ತು. ಅದು ಮುಗಿದ ಮೊದಲ ವಾರ ₹3 ಲಕ್ಷ ಆದಾಯ ಸಂಗ್ರಹವಾಗಿತ್ತು. ಈಗ ಪ್ರಯಾಣಿಕರ ಸ್ಪಂದನೆ ಹೆಚ್ಚಳಗೊಂಡು ಆದಾಯವೂ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಬಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ’ ಎನ್ನುತ್ತಾರೆ.

ADVERTISEMENT

ಮಹಾರಾಷ್ಟ್ರಕ್ಕೆ ಬಸ್ ಸೇವೆ ನಿರೀಕ್ಷೆ: ‘ಬಾಗಲಕೋಟೆ ವಿಭಾಗದಿಂದ ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ನಿತ್ಯ 103 ಬಸ್‌ಗಳ‌ ಷೆಡ್ಯೂಲ್ ಇದೆ. ಆದರೆ ಅಲ್ಲಿ ಇನ್ನೂ ಲಾಕ್‌ಡೌನ್ ಇದೆ. ಹೀಗಾಗಿ ಬಸ್ ಸಂಚಾರ ಆರಂಭವಾಗಿಲ್ಲ. ಮಹಾರಾಷ್ಟ್ರಕ್ಕೆ ಬಸ್‌ಗಳ ಓಡಾಟ ಆರಂಭವಾದರೆ ಆದಾಯ ಗಣನೀಯವಾಗಿ ಹೆಚ್ಚಳವಾಗಲಿದೆ. ಸೆಪ್ಟೆಂಬರ್ 1ರಿಂದ ಅಲ್ಲಿ ಲಾಕ್‌ಡೌನ್ ಮುಗಿಯಲಿದೆ. ಶೀಘ್ರ ಬಸ್ ಸಂಚಾರ ಆರಂಭವಾಗಬಹುದು’ ಎಂದು ಅಮ್ಮಣ್ಣವರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಇನ್ನು ಆಂಧ್ರಪ್ರದೇಶದ ಮಂತ್ರಾಲಯ ಹಾಗೂ ಕರ್ನೂಲ್‌ಗೆ ಬಸ್‌ ಆರಂಭವಾಗಿವೆ. ತೆಲಂಗಾಣ ಅನುಮತಿ ನೀಡದ ಕಾರಣ ಹೈದರಾಬಾದ್‌ಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.