ಬೀಳಗಿ: ‘ಒಳಮೀಸಲಾತಿ ಜಾರಿಗಾಗಿ ಸುದೀರ್ಘವಾಗಿ ನಡೆದ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ನೀಡಲು ಜಾತಿಗಣತಿ ಸಮೀಕ್ಷೆ ನಡೆಸಿದ್ದು, ಸಮಾಜದ ಎಲ್ಲರೂ ಜಾತಿ ಕಾಲಂ 61 ರಲ್ಲಿ ಮಾದಿಗ ಎಂದು ನೋಂದಾಯಿಸಬೇಕು’ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸೋಮು ಚೂರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಮೇ 5ರಿಂದ ಒಳಮೀಸಲಾತಿ ಸಮೀಕ್ಷೆ ಆರಂಭವಾಗಲಿದ್ದು, ಸಮೀಕ್ಷೆದಾರರು ಮನೆ ಮನೆಗೆ ತೆರಳಿ ಮಾಹಿತಿ ಪಡೆಯಲಿದ್ದಾರೆ. ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು. ಬೇರೆ ಯಾವುದೇ ಜಾತಿ, ಉಪಜಾತಿ ಹೆಸರು ಬರೆಸಿದರೆ ನಮ್ಮ ಮುಂದಿನ ಪೀಳಿಗೆಯು ಸೌಲಭ್ಯ ಹಾಗೂ ಮೀಸಲಾತಿಯಿಂದ ವಂಚಿತರಾಗುತ್ತೆವೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಸುದೀರ್ಘ ಹೋರಾಟ ನಡೆದಿದೆ. ಮೀಸಲಾತಿ ಜಾರಿಯಾಗಬೇಕೆಂಬ ಉದ್ದೇಶ ಹಾಗೂ ಕನಸನ್ನು ಹೊಂದಲಾಗಿತ್ತು. ವಂಚಿತವಾದ ಮಾದಿಗ ಸಮಾಜದಿಂದ ಒಳಮೀಸಲಾತಿ ಜಾರಿಗೆ ಹೋರಾಟವು ನಡೆಯಿತು. ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿಯೂ ಈ ಬಗ್ಗೆ ಹೋರಾಟ ನಡೆದಿದ್ದು, ಹೋರಾಟಕ್ಕೆ ಹೆಚ್ಚು ಶಕ್ತಿ ಬಂದಿದೆ. ಜಿಲ್ಲೆಯ ಹೋರಾಟಗಾರರು, ಸಮಾಜದ ಮುಖಂಡರು, ನಿರಂತರವಾಗಿ ಹೋರಾಟ ನಡೆಸಿದ್ದರಿಂದ ಸರ್ಕಾರ ಒಳಮೀಸಲಾತಿ ಜಾರಿಗೆ ಮುಂದಾಗಿದೆ’ ಎಂದರು.
ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಾನಂದ ಬಿಸನಾಳ, ಉಪಾಧ್ಯಕ್ಷ ಸಿದ್ದು ಮಾದರ, ಕಾರ್ಯದರ್ಶಿ ನಾಗೇಶ ಸಿಡ್ಲನ್ನವರ, ಹಿರಿಯ ಮುಖಂಡ ಆನಂದ ಬಾಬು ಪುಜಾರಿ, ಆನಂದ ಪುಜಾರಿ (ಗಲಗಲಿ) ಗಂಗಪ್ಪ ಹದರಿಹಾಳ, ಯಲ್ಲಪ್ಪ ಸಿರಗುಪ್ಪಿ, ಮಹೇಶ ಮಾದರ, ರಮೇಶ ಅನಗವಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.