ADVERTISEMENT

ಶ್ರಮದಾನದಿಂದ ಸ್ಮಶಾನಕ್ಕೆ ಜೀವಕಳೆ!

ಅಭಿವೃದ್ಧಿ ಸೇವಾ ಸಮಿತಿ ಕಾರ್ಯಕ್ಕೆ ಇಳಕಲ್ ನಿವಾಸಿಗಳ ಶ್ಲಾಘನೆ

ಬಸವರಾಜ ಅ.ನಾಡಗೌಡ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
ಇಳಕಲ್‌ನ ಸ್ಮಶಾನ ಅಭಿವೃದ್ಧಿಗೆ ಕೈಜೋಡಿಸಿದ ಮಹನೀಯರು
ಇಳಕಲ್‌ನ ಸ್ಮಶಾನ ಅಭಿವೃದ್ಧಿಗೆ ಕೈಜೋಡಿಸಿದ ಮಹನೀಯರು   

ಇಳಕಲ್‌ : ಸ್ಮಶಾನ ಅಭಿವೃದ್ಧಿ ಸೇವಾ ಸಮಿತಿ, ಯೋಗ ಕುಟುಂಬ ಹಾಗೂ ವಾಯು ವಿಹಾರಿಗಳ ಬಳಗ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸದಸ್ಯರು ಕಳೆದ ಐದು ಭಾನುವಾರ ಮಾಡಿದ ಶ್ರಮದಾನ ಹಾಗೂ ನಗರಸಭೆಯ ಸಹಕಾರದಿಂದಾಗಿ ನಗರದ ಮುಕ್ತಿಧಾಮ (ಸ್ಮಶಾನ) ಸ್ವಚ್ಛಗೊಂಡಿತು.

ಸ್ವಚ್ಛತೆಗೂ ಮುನ್ನ ಸ್ಮಶಾನದಲ್ಲಿ ಚಿಂದಿ ಬಟ್ಟೆಗಳು, ಹರಿದ ಹಾಸಿಗೆಗಳು, ಒಣಗಿದ ಹಾರ, ಗ್ರಾನೈಟ್‌ ಪಾಲಿಶಿಂಗ್‌ ಫ್ಯಾಕ್ಟರಿಗಳ ತ್ಯಾಜ್ಯ, ಮುಳ್ಳಿನ ಕಂಟಿಗಳು ತುಂಬಿದ್ದವು. ಇಡೀ ಪ್ರದೇಶ ತಗ್ಗು ದಿನ್ನೆಗಳಿಂದ ಕೂಡಿದ ಹಸಿರಿಲ್ಲದ ಬಯಲಾಗಿತ್ತು. ಸುಣ್ಣ ಬಣ್ಣ ಕಾಣದೇ ಪೇಲವಗೊಂಡಿದ್ದ ಚಿತಾಗಾರ.

ಆದರೆ ಈಗ ಎಲ್ಲವೂ ಬದಲಾಗಿದೆ. ನಗರದ ಅನೇಕ ಸಂಘಸಂಸ್ಥೆಗಳು, ಸಮಾನ ಮನಸ್ಕ ಗೆಳೆಯರ ಪ್ರಯತ್ನದ ಫಲವಾಗಿ ಸ್ಮಶಾನ ಹಿಂದಿನ ಅಸಹನೀಯ ರೂಪನ್ನು ಕಳೆದುಕೊಂಡು, ಸುಂದರಗೊಂಡಿದೆ. ಇಲ್ಲಿ ನೀರು. ನೆರಳು ಸೇರಿದಂತೆ ಒಂದೊಂದಾಗಿ ಮೂಲಸೌಲಭ್ಯಗಳು ರೂಪುಗೊಳ್ಳುತ್ತಿವೆ.

ADVERTISEMENT

ಈ ಹಿಂದೆ ಸ್ಮಶಾನ ಅಭಿವೃದ್ಧಿಗಾಗಿ ನಗರಸಭೆಯಿಂದ ಹಣ ಖರ್ಚು ಮಾಡಲಾಗಿದ್ದರೂ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಸಸಿಗಳನ್ನು ನೆಡುವುದಕ್ಕೆ ಒಂದಿಷ್ಟು ಗುಂಡಿಗಳನ್ನು ಅಗೆದು ಕೈ ಚೆಲ್ಲಿದ್ದರು. ಮಾರವಾಡಿ ಸಮಾಜದಿಂದ ಕಟ್ಟಿಸಲಾಗಿದ್ದ ಚಿತಾಗಾರದ ಆವರಣವು ಸಹ ನಿರ್ಲಕ್ಷಕ್ಕೀಡಾಗಿತ್ತು. ಅಂತ್ಯಕ್ರಿಯೆಗೆ ಹೋದವರು ಅಲ್ಲಿರುವ ವ್ಯವಸ್ಥೆ ಕಂಡು ಶಪಿಸುತ್ತಲೇ ಬರುತ್ತಿದ್ದರು.

ಈಗ ಸ್ಮಶಾನದ ಚಿತ್ರಣ ಬದಲಾಗಿದೆ. ಇಡೀ ಸ್ಮಶಾನಕ್ಕೆ ಕಳೆ ಬಂದಿದೆ. ಪೌರಾಯುಕ್ತ ಜಗದೀಶ ಹುಲಗೆಜ್ಜಿ ‘ಎಲ್ಲರೂ ಸೇರಿ ಸ್ಮಶಾನ ಅಭಿವೃದ್ಧಿಗೆ ಮುಂದಾದರೆ, ನಗರಸಭೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಪ್ರಸ್ತಾಪ ಮುಂದಿಟ್ಟರು. ಆಗ ‘ಸ್ಮಶಾನ ಅಭಿವೃದ್ಧಿ ಸೇವಾ ಸಮಿತಿ’ ಅಸ್ತಿತ್ವಕ್ಕೆ ಬಂತು. ಪ್ರತಿ ಭಾನುವಾರ ಶ್ರಮದಾನ ಆರಂಭವಾಯಿತು.

ಈಗ ಶವದ ಅಂತ್ಯಸಂಸ್ಕಾರದ ನಂತರ ಹಾರಗಳು ಸೇರಿದಂತೆ ತ್ಯಾಜ್ಯವನ್ನು ವಿಸರ್ಜಿಸಲು ತೊಟ್ಟಿಗಳನ್ನು ಇಡಲಾಗಿದೆ. ಮುಳ್ಳುಕಂಟಿಗಳನ್ನು ಕಿತ್ತು, ಕಸವನ್ನು ಆಯ್ದು ಸ್ವಚ್ಛಗೊಳಿಸಲಾಗಿದೆ. ಸ್ಮಶಾನದ ವಿಶಾಲವಾದ ಆವರಣದಲ್ಲಿ ನೂರಾರು ಸಸಿಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ. ನಗರಸಭೆ ಬೋರ್‌ವೆಲ್‌ ಹಾಗೂ 24/7 ಪೈಲ್ ಲೈನ್‍ ಮೂಲಕ ನೀರಿನ ವ್ಯವಸ್ಥೆ ಮಾಡಿದೆ. ಚಿತಾಗಾರದ ಸುಣ್ಣ ಬಣ್ಣಕ್ಕಾಗಿ ವಿಜಯಕುಮಾರ ಹಂಚಾಟೆ ಅವರು 10 ಸಾವಿರ, ಮಹಾಂತೇಶ ಕರ್ಜಗಿ ನೀರೆತ್ತುವ ಮೋಟಾರ್, ನವೀನ್‍ ಕರ್ಜಗಿ ಪೈಪ್‍ ಗಳನ್ನು ನೀಡಿದ್ದಾರೆ. ಅರಣ್ಯ ಇಲಾಖೆ ಸಸಿಗಳನ್ನು ನೀಡಿದೆ.

ಪ್ರತಿ ಭಾನುವಾರದ ಶ್ರಮದಾನದಲ್ಲಿ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಪಾಲ್ಗೊಂಡಿದ್ದರು. ‘ಇದು (ಸ್ಮಶಾನ) ಎಲ್ಲರ ಶಾಶ್ವತ ಮನೆ, ಸ್ವಚ್ಛವಾಗಿಡೋಣ’ ಎನ್ನುತ್ತಿದ್ದರು. ಸಮಿತಿಯ ಸದಸ್ಯರಾದ ಸುಗೂರೇಶ ನಾಗಲೋಟಿ, ಪ್ರಶಾಂತ ಹಂಚಾಟೆ, ವಿನೋದ ಬಾರಿಗೀಡದ, ಗಿರೀಶ ಲದ್ವಾ, ಪರಶುರಾಮ ಬಿಸಲದಿನ್ನಿ, ಶರಣಮ್ಮ ಅಂಗಡಿ, ನಾಮದೇವ ಪಾಣಿಬಾತೆ, ಕಪಿಲ್ ಪವಾರ, ಆನಂದ ಪಾಟೀಲ, ಶ್ರೀನಿವಾಸ ಕಠಾರೆ, ನವೀನ ಖರ್ಜಗಿ, ಬಸವರಾಜ ಪೋಚಗುಂಡಿ ಹಾಗೂ ವಾಯು ವಿಹಾರಿಗಳ ಬಳಗದ ಸದಸ್ಯರು ಶ್ರಮದಾನದಲ್ಲಿ ಕೈಜೋಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.