ADVERTISEMENT

ಪಟ್ಟದಕಲ್ಲು | ಚಾಲುಕ್ಯರ ಹಿರಿಮೆ ಸಾರುವ ಕೆಲಸ ಆಗಲಿ :ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 6:01 IST
Last Updated 21 ಜನವರಿ 2026, 6:01 IST
ಪಟ್ಟದಕಲ್ಲಿನ ಮಂಗಳವಾರ ನಡೆದ ಚಾಲುಕ್ಯ ಉತ್ಸವದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಉದ್ಘಾಟಿಸಿದರು
ಪಟ್ಟದಕಲ್ಲಿನ ಮಂಗಳವಾರ ನಡೆದ ಚಾಲುಕ್ಯ ಉತ್ಸವದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಉದ್ಘಾಟಿಸಿದರು   

ಪಟ್ಟದಕಲ್ಲು (ಬಾದಾಮಿ): ವಿಶ್ವದ ಭೂಪಟದಲ್ಲಿ ಕಾಣುವ ಬಾದಾಮಿಯನ್ನು ಅಭಿವೃದ್ಧಿ ಪಡಿಸುವ ಕೆಲಸ ನಮ್ಮೆಲ್ಲರದ್ದಾಗಿದೆ. ಚಾಲುಕ್ಯರ ಹಿರಿಮೆಯನ್ನು ವಿಶ್ವದೆಲ್ಲೆಡೆ ಸಾರುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲಿನ ಮಂಗಳವಾರ ನಡೆದ ಚಾಲುಕ್ಯ ಉತ್ಸವದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಮಾಡಿದರೆ ಯುವಕರಿಗೆ ಉದ್ಯೋಗ, ರೈತರಿಗೆ ಮಾರುಕಟ್ಟೆ ಲಭಿಸುತ್ತದೆ. ಜಿಲ್ಲೆಯ ಶಾಸಕರ ಪ್ರಯತ್ನದ ಫಲವಾಗಿ ಉತ್ಸವ ಆಯೋಜನೆಯಾಗಿದೆ. ಉತ್ಸವದ ಹಣವನ್ನು ಸರ್ಕಾರ ₹2 ರಿಂದ ₹4 ಕೋಟಿಗೆ ಹೆಚ್ಚಿಸಲಾಗಿದೆ ಎಂದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಚಾಲುಕ್ಯ ಉತ್ಸವ ಮಾಡಬೇಕು ಎಂಬ ಬಹುದಿನಗಳ ಕನಸು ಈಡೇರಿದೆ. ಇಮ್ಮಡಿ ಪುಲಿಕೇಶಿ ಮೂರ್ತಿಯನ್ನು ವರ್ಷದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಪಟ್ಟದಕಲ್ಲಿನಲ್ಲಿ 98 ರಾಜರ ಪಟ್ಟಾಭಿಷೇಕ ಮಾಡಲಾಗಿದೆ. ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಮಲಪ್ರಭಾ ನದಿಯೂ ಕಾರಣವಾಗಿದೆ. ಇದೊಂದು ಐತಿಹಾಸಿಕ ಗ್ರಾಮವಾಗಿದೆ. ಇಮ್ಮಡಿ ಪುಲಿಕೇಶಿ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಹಿಂದೂ ಧರ್ಮದ ಜೊತೆಗೆ ಜೈನ ಧರ್ಮವೂ ಇಲ್ಲಿ ಕಾಣಬಹುದು. ಎಲ್ಲ ಜಾತಿಗಳನ್ನು ಸಮಾನವಾಗಿ ಕಂಡಿದ್ದರು. ಅದನ್ನೇ ನಾವೂ ಅನುಸರಿಸಬೇಕಿದೆ ಎಂದು ಹೇಳಿದರು.

ಪಲ್ಲವರನ್ನು ಸೋಲಿಸಿದ ಮೇಲೆ ವಿರೂಪಾಕ್ಷ ದೇವಾಲಯ 98 ಸಾವಿರ ಗ್ರಾಮಗಳನ್ನು ಹೊಂದಿದ್ದ, ಮೂರು ರಾಷ್ಟ್ರಗಳು ಅವರ ಆಡಳಿತಕ್ಕೆ ಒಳಪಟ್ಟಿದ್ದವು. ಉತ್ಸವ ಮನರಂಜನೆಗೆ ಸೀಮಿತವಾಗಬಾರದು. ಇಮ್ಮಡಿ ಪುಲಿಕೇಶಿ ಅವರನ್ನು ಬಾದಾಮಿಗೆ ಸಿಮೀತಗೊಳಿಸಿದ್ದೇವೆ. ದೇಶಕ್ಕೆ ಅವರ ಕೀರ್ತಿಯನ್ನು ಹರಡುವ ಕೆಲಸ ಆಗಬೇಕು ಎಂದರು.

ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಚಾಲುಕ್ಯ ಉತ್ಸವ ಮೂರು ದಿನಕ್ಕೆ ಸೀಮಿತವಾಗಬಾರದು. ಇಲ್ಲಿನ ಶಿಲ್ಪಕಲೆಯ ವೈಭವವನ್ನು ವರ್ಷಪೂರ್ತಿ ಸಾರುವ ಕೆಲಸ ಆಗಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಕಾಲಗಗ್ಗರಿ, ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಶೋಕ ತೇಲಿ, ಎನ್‌.ವೈ. ಬಸರಿಗಿಡದ ಇದ್ದರು.

ಪಟ್ಟದಕಲ್ಲಿನ ನಡೆದ ಚಾಲುಕ್ಯ ಉತ್ಸವ ವೀಕ್ಷಿಸಲು ಬಂದಿದ್ದ ಜನಸ್ತೋಮ

ವಾಸ್ತುಶಿಲ್ಪದ ಪ್ರಯೋಗಾಲಯ ಬಾದಾಮಿ:  ಕಲೆ ಸಾಹಿತ್ಯ ಸಂಗೀತ ಶಿಲ್ಪಕಲೆಗೆ ಚಾಲುಕ್ಯರು ಅದ್ಯತೆ ನೀಡಿದ್ದರು. ಪಟ್ಟದಕಲ್ಲು ವಾಸ್ತುಶಿಲ್ಪದ ಪ್ರಯೋಗಾಲಯವಾಗಿತ್ತು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಬಾಣಾಪುರ–ಶಿರೂರವರೆಗೆ ರಾಷ್ಟ್ರೀಯ ಹೆದ್ದಾರಿ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಿಂದಾಗಿ ಅರ್ಧಕ್ಕೆ ನಿಂತಿದೆ. ಮರುಪ್ರಾರಂಭಕ್ಕೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದೇನೆ ಎಂದರು. ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಹತ್ತು ವರ್ಷಗಳ ನಂತರ ಉತ್ಸವಕ್ಕೆ ಆಗುತ್ತಿದೆ. ಚಾಲುಕ್ಯರ ನಾಡು ಭವ್ಯ ಪರಂಪರೆ ಹೊಂದಿದೆ. ಇತಿಹಾಸ ತಿಳಿಯದವನು ಇತಿಹಾಸ ರಚಿಸಲಾರ. ಕನ್ನಡ ಭಾಷೆಯ ಹಿರಿಮೆಯನ್ನು ಚಾಲುಕ್ಯರು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.